ವಕ್ಫ್ ಆಸ್ತಿ-ಸಂಸ್ಥೆಗಳ ಮೂಲಕ ಮುಸ್ಲಿಂ ಸಮುದಾಯದ ಸಬಲೀಕರಣಕ್ಕೆ ಎಸ್‍ಡಿಪಿಐ ಆಗ್ರಹ
ಬೆಂಗಳೂರು, ಮೇ 14: ರಾಜ್ಯದಲ್ಲಿರುವ ವಕ್ಫ್ ಆಸ್ತಿ ಮತ್ತು ಸಂಸ್ಥೆಗಳ ಮೂಲಕ ಮುಸ್ಲಿಂ ಸಮುದಾಯವನ್ನು ಸಬಲೀಕರಣ ಮಾಡಬೇಕು ಎಂದು ಎಸ್‍ಡಿಪಿಐ ಒತ್ತಾಯಿಸಿದೆ.
ರಾಜ್ಯದ ಜನಸಂಖ್ಯೆಯಲ್ಲಿ 18 ಶೇಕಡಾದಷ್ಟು ಇರುವ ಮುಸ್ಲಿಂ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವುದು ನಮ್ಮೆಲ್ಲರ ಸದಾಶಯ. ಇದು ಒಟ್ಟಾರೆಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಪೂರಕವಾಗಿದೆ. ರಾಜ್ಯದಲ್ಲಿರುವ ವಕ್ಫ್ ಸ್ವತ್ತನ್ನು ಸರಿಯಾದ ದಕ್ಷ ಹಾಗೂ ಪ್ರಾಮಾಣಿಕ ದಿಕ್ಕಿನಲ್ಲಿ ತೊಡಗಿಸಿಕೊಂಡರೆ ಮುಸ್ಲಿಂ ಸಮುದಾಯದ ಅಭಿವೃದ್ಧಿಯನ್ನು ಸಾಧಿಸಬಹುದು.
ಎಲ್ಲಾ ರಂಗಗಳಲ್ಲಿ ಹಿಂದೆ ಬಿದ್ದಿರುವ ಮುಸ್ಲಿಂ ಸಮುದಾಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಸಮುದಾಯದಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಉಪಯೋಗಿಸಬೇಕಾಗಿರುವುದು ಅತ್ಯಂತ ಅನಿವಾರ್ಯವಾಗಿದೆ. ರಾಜ್ಯದಲ್ಲಿರುವ ವಕ್ಫ್ ಆಸ್ತಿಯಲ್ಲಿ ಅಥವಾ ವಕ್ಫ್ ಸಂಸ್ಥೆಗಳಲ್ಲಿ ಹೆಚ್ಚುವರಿಯಾಗಿ ಠೇವಣಿಯಾಗಿರುವ ಮೊಬಲಗನ್ನು ಸಮುದಾಯದ ಉನ್ನತಿಗಾಗಿ ಇಲಾಖೆ ಹೇಗೆ ವಿನಿಯೋಗಿಸುತ್ತಿದೆ ಎನ್ನುವ ಬಗ್ಗೆ ಸಮುದಾಯದೊಳಗೆ ಬಹಳ ಗೊಂದಲವಿದೆ. ಇದನ್ನು ಪರಿಹರಿಸಬೇಕಾಗಿದೆ ಎಂದು ಎಸ್‍ಡಿಪಿಐ ಹೇಳಿದೆ.
ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಅಸ್ತಿತ್ವದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಉಲಮಾಗಳ ಕ್ಷೇಮ, ಬಡ ಮುಸ್ಲಿಮರ ವಸತಿ-ಉದ್ಯೋಗಯೋಜನೆ, ಆಸ್ಪತ್ರೆ-ವೈದ್ಯಕೀಯ ಸಂಸ್ಥೆಗಳ ನಿರ್ಮಾಣ-ಸೇವೆ, ಇತ್ಯಾದಿಗಳಿಗಾಗಿ ನಿಧಿಯನ್ನು ಬಳಸುವುದಕ್ಕಾಗಿ ಇಲಾಖೆಯಲ್ಲಿ ಯೋಜನೆಗಳು ಜಾರಿಗೆ ಬರಬೇಕಾಗಿದೆ ಎಂದು ತಿಳಿಸಲಾಗಿದೆ.
ಆಯಾಯ ವಕ್ಫ್ ಸೊತ್ತುಗಳ-ನಿಧಿಗಳ ಆಯವ್ಯಯ-ಮಿಗತೆ-ಠೇವಣಿ ಇತ್ಯಾದಿಗಳನ್ನೊಳಗೊಂಡ ಲೆಕ್ಕಪತ್ರಗಳ ಸಾರ್ವಜನಿಕ ಅವಗಾಹನೆಗಾಗಿ ಬಹಿರಂಗ ಪ್ರದರ್ಶನಕ್ಕೆ ವಕ್ಫ್ ಇಲಾಖೆಯಿಂದ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ದೂರಿನ ಬಗ್ಗೆ ಶೀಘ್ರ ಸ್ಪಂದನ ಇತ್ಯಾದಿಗಳಿಗಾಗಿ ‘ಆನ್ ಲೈನ್’ ವ್ಯವಸ್ಥೆ ಪ್ರಾರಂಭವಾಗಬೇಕಾಗಿದೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕರ್ನಾಟಕದ 26 ಪ್ರತಿಷ್ಠಿತ ವಕ್ಫ್ ಸಂಸ್ಥೆಗಳ ಮೂಲಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯತೆಯಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಬೋರ್ಡ್ ಆಫ್ ಔಕಾಫ್‍ನಿಂದ ಪ್ರತಿ ಜಿಲ್ಲೆಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಒಂದು ಜವಾಬ್ದಾರಿಯುತ ಹಾಗೂ ದೂರದೃಷ್ಟಿಯ ಸದುದ್ದೇಶದಿಂದ ಕೆಲಸ ಮಾಡುವ ನಮ್ಮ ರಾಜಕೀಯ ಚಳುವಳಿಯ SDPIಗೆ ಈ ವಿವರಗಳು ಬಹಳ ಅಗತ್ಯವಾಗಿದ್ದು, ಸಮುದಾಯದೊಳಗೆ ಧನಾತ್ಮಕ ಪ್ರಜ್ಞಾವಂತಿಕೆ ಮೂಡಿಸಲು ಇದು ಅತ್ಯಂತ ಅನಿವಾರ್ಯವಾಗಿದೆ. ಈ ಬಗ್ಗೆ ಸಂಜೆ ಗಂಟೆ 4 ರಿಂದ ಎಸ್‍ಡಿಪಿಐ ವತಿಯಿಂದ ಟ್ವಿಟರ್ ಅಭಿಯಾನ ನಡೆಯಲಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಪ್ರಕಟನೆಯಲ್ಲಿ ಹೇಳಿದ್ದಾರೆ.







