ಮನೆಯಿಂದಲೇ ಕೆಲಸ ಮಾಡಲು ಪತ್ರಕರ್ತೆಯರಿಗೆ ಅಗತ್ಯ ಪರಿಕರ ಒದಗಿಸಲು ಮನವಿ
ಬೆಂಗಳೂರು, ಮೇ 14: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಪತ್ರಕರ್ತೆಯರಿಗೆ ರಾಜ್ಯ ಸರಕಾರದಿಂದ ಅಗತ್ಯ ಪರಿಕರಗಳನ್ನು ಒದಗಿಸಬೇಕು. ಸೋಂಕು ನಿವಾರಣೆಗಾಗಿ ಕಾರ್ಯಾಗಾರ, ಕ್ಷೇತ್ರ ಪ್ರಾತ್ಯಕ್ಷತೆ ಏರ್ಪಡಿಸಬೇಕೆಂದು ಕೋರಿ ಕರ್ನಾಟಕ ಪತ್ರಕರ್ತೆಯರ ಸಂಘ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದೆ.
ಗುರುವಾರ ನಗರದಲ್ಲಿ ಸಂಘದ ಹಿರಿಯ ಸಲಹೆಗಾರ್ತಿ ಕೆ.ಎಚ್.ಸಾವಿತ್ರಿ ಸುರೇಶ್ ಕುಮಾರ್, ಅಧ್ಯಕ್ಷೆ ಶಾಂತಲಾ ಧರ್ಮರಾಜ್ ನೇತೃತ್ವದ ನಿಯೋಗ, ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿತು. ಸಮಾಜ ಕಲ್ಯಾಣ ಇಲಾಖೆ ಪತ್ರಕರ್ತೆಯರಿಗೆ ವೃತ್ತಿಪರ ಕೌಶಲ್ಯ ಅಭಿವೃದ್ಧಿಗೆ ಕಾರ್ಯಾಗಾರ ಆಯೋಜಿಸಬೇಕು. ಇದರಿಂದ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತೆಯರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಕೋರಿದರು.
ಮನವಿಗೆ ಸ್ಪಂದಿಸಿದ ಗೋವಿಂದ ಕಾರಜೋಳ, ಕೊರೋನ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತೆಯರಿಗೆ ನೆರವು ನೀಡಲು ರಾಜ್ಯ ಸರಕಾರ ಬದ್ಧ. ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗದೆ ನಿಮ್ಮ ಕಾರ್ಯ ನಿರ್ವಹಿಸಿ, ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿ, ನಿಮ್ಮ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ಪೆದ್ದಯ್ಯ, ಅಪರ ನಿರ್ದೇಶಕ ನಾಗೇಶ್, ಸಂಘದ ಪದಾಧಿಕಾರಿಗಳಾದ ಮಾಲತಿ ಭಟ್, ವನಿತಾ, ಅಕ್ಷರ, ಗೊರೂರು ಪಂಕಜ ಸೇರಿದಂತೆ ಇನ್ನಿತರರು ಹಾಜರಿದ್ದರು.







