ಸಿಗರೇಟ್ ವಿತರಕರಿಂದ ಪೊಲೀಸರು ಲಂಚ ಪಡೆದ ಆರೋಪ: ಪ್ರಕರಣವನ್ನು ಎಸಿಬಿಗೆ ವಹಿಸಿ ಪ್ರವೀಣ್ ಸೂದ್ ಆದೇಶ

ಪ್ರವೀಣ್ ಸೂದ್
ಬೆಂಗಳೂರು, ಮೇ.14: ಸಿಗರೇಟ್ ವಿತರಕರಿಂದ ಸಿಸಿಬಿ ಎಸಿಪಿ ಪ್ರಭುಶಂಕರ್, ಇನ್ಸ್ಪೆಕ್ಟರ್ ಗಳಾದ ಅಜಯ್ ಮತ್ತು ನಿರಂಜನಕುಮಾರ್ ಲಂಚ ಪಡೆದ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖೆಗೆ ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಅವರು ವಹಿಸಿ ಆದೇಶಿಸಿದ್ದಾರೆ.
ಮೂವರು ಅಧಿಕಾರಿಗಳು ಸಿಗರೇಟ್ ವಿತರಕರಿಂದ ಲಂಚ ಪಡೆದಿರುವ ಸಂಬಂಧ ಸಿಸಿಬಿಯ ಡಿಸಿಪಿಗಳಾದ ಕುಲದೀಪ್ ಕುಮಾರ್ ಹಾಗೂ ರವಿಕುಮಾರ್ ಅವರು ನೀಡಿದ ವರದಿಯನ್ನು ಪರಿಶೀಲಿಸಿದ ನಂತರ ಎಸಿಬಿ ತನಿಖೆಗೆ ವಹಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈ ನಡುವೆ ಸಿಗರೇಟ್ ವಿತರಕರಿಂದ ಸುಲಿಗೆ ಮಾಡಿರುವುದು ಸಾಬೀತಾಗಿದ್ದು, ಮೂವರ ವಿರುದ್ಧ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದು, ಅದರ ತನಿಖೆಯನ್ನು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಅವರು ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಏನಿದು ಪ್ರಕರಣ?: ಎಸಿಬಿ ಪ್ರಭುಶಂಕರ್, ಅಜಯ್ ಹಾಗೂ ನಿರಂಜನಕುಮಾರ್ ಸಿಗರೇಟ್ ವಿತರಕರಿಂದ ಹಣ ವಸೂಲಿ ಮಾಡಿರುವ ಆರೋಪ ಪ್ರಕರಣ ಪ್ರಕರಣ ಕುರಿತು ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿ ವರದಿ ನೀಡಿದ್ದರು. ವರದಿಯನ್ನು ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಸಲ್ಲಿಸಿದ ನಂತರ ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಅವರಿಗೆ ಸಲ್ಲಿಸಲಾಗಿತ್ತು.







