ಶುಶ್ರೂಷಕರು, ವೈದ್ಯರಿಗೂ ಹರಡುತ್ತಿರುವ ಕೊರೋನ: ಆರೋಗ್ಯ ಕ್ಷೇತ್ರದಲ್ಲಿ ಆತಂಕ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 14: ಸಾಮಾನ್ಯ ಜನರಿಗೆ ಚಿಕಿತ್ಸೆ ನೀಡುತ್ತಿರುವ ಶುಶ್ರೂಷಕರಿಗೂ ಹಾಗೂ ವೈದ್ಯರಿಗೂ ಸೋಂಕು ಹರಡುತ್ತಿದ್ದು, ಇದರಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗಿದೆ.
ಇದರಿಂದಾಗಿ ಪಿಪಿಇ ಕಿಟ್ ಒದಗಿಸುವಂತೆ ಬೇರೆ ಸರಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳ ವೈದ್ಯರು, ನರ್ಸ್ಗಳು ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕ್ಷೇತ್ರದ ಸಂಘಟನೆಗಳು ತಾವಾಗಿಯೇ ಕಿಟ್ಗಳನ್ನು ಖರೀದಿಸಲು ಪ್ರಯತ್ನ ನಡೆಸಿವೆ. ಆದರೆ ಬೇಡಿಕೆ ಹೆಚ್ಚಿರುವುದರಿಂದ ಕಿಟ್ ಸುಲಭವಾಗಿ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಸರಕಾರ ಮಾತ್ರವಲ್ಲದೆ ಖಾಸಗಿ ಆರೋಗ್ಯ ಕ್ಷೇತ್ರದಿಂದಲೂ ಖರೀದಿ ಹೆಚ್ಚಲಿದೆ.
ಎಲ್ಲ ಕಡೆಯಿಂದ ಖರೀದಿ ಹೆಚ್ಚಾದರೆ ಕಿಟ್ಗೆ ಕೊರತೆ ಉಂಟಾಗುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ವೈದ್ಯರು ಕಿಟ್ಗೆ ಬೇಡಿಕೆ ಇಟ್ಟಿದ್ದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕ ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ನಸಿರ್ಂಗ್ ಹೋಮ್ ಅಸೋಸಿಯೇಶನ್ (ಫಾನಾ) ಖಾಸಗಿ ಕ್ಲಿನಿಕ್ಗಳ ವೈದ್ಯರಿಗೆ ಕಿಟ್ ಸರಬರಾಜು ಮಾಡುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದವು. ಆದರೆ ಕೋವಿಡ್-19ಗೆ ಸಂಬಂಧಿಸಿದ ಮಾರ್ಗಸೂಚಿಯೊಂದರ ಪ್ರಕಾರ, ಕೋವಿಡ್ಗೆ ಮೀಸಲಿಟ್ಟ ಆಸ್ಪತ್ರೆಗಳಲ್ಲಿ ಕೊರೋನ ರೋಗಿಗಳ ಸೇವೆಯಲ್ಲಿರುವವರಿಗೆ ಮಾತ್ರ ಕಿಟ್ ನೀಡಲಾಗುತ್ತದೆ. ಈ ಮಾರ್ಗಸೂಚಿ ಪ್ರಕಾರ ಕಿಟ್ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಘಟನೆಗಳಿಗೆ ಸ್ಪಷ್ಟಪಡಿಸಿದ್ದಾರೆ.
ಸರಕಾರಿ ಆಸ್ಪತ್ರೆಗಳಲ್ಲೂ ಒತ್ತಾಯ: ಇತ್ತೀಚೆಗೆ ಹುಬ್ಬಳ್ಳಿ ಸರಕಾರಿ ಆಸ್ಪತ್ರೆಯ ಹೊರರೋಗಿ ವಿಭಾಗದ ಸಿಬ್ಬಂದಿ ಪಿಪಿಇ ಕಿಟ್ ಪೂರೈಸಬೇಕೆಂದು ಪಟ್ಟು ಹಿಡಿದಿದ್ದರು. ನಂತರ ಮಾರ್ಗಸೂಚಿ ಪ್ರಕಾರ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲೂ ಕೊರೋನ ಭೀತಿ ಉಂಟಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಪ್ರತಿಭಟಿಸಿ ಪಿಪಿಇ ಕಿಟ್ಗೆ ಆಗ್ರಹಿಸಿದ್ದರು.
1 ಲಕ್ಷ ಕಿಟ್: ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವವರಿಗಾಗಿ ಚೀನಾದಿಂದ 1 ಲಕ್ಷ ಪಿಪಿಇ ಕಿಟ್ ಖರೀದಿಸಲಾಗಿದೆ. ಬಳಿಕ ಮತ್ತೆ ಎಚ್ಎಲ್ಎಲ್ ಕಂಪನಿಯಿಂದ 5 ಲಕ್ಷ ಕಿಟ್ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ 50 ಸಾವಿರ ಕಿಟ್ಗಳು ಪೂರೈಕೆಯಾಗಿವೆ. ಕೆಲ ಜಿಲ್ಲೆಗಳಲ್ಲಿ ಸಂಘ, ಸಂಸ್ಥೆಗಳು ವೈದ್ಯರಿಗೆ ಕಿಟ್ ಪೂರೈಸಿವೆ. ಕಾಲಕಾಲಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಿ ಖರೀದಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.







