ಉತ್ತರಪ್ರದೇಶದಲ್ಲಿ ಮೂರು ಪ್ರತ್ಯೇಕ ಅಪಘಾತ: ಆರು ಕಾರ್ಮಿಕರು ಮೃತ್ಯು
ಲಕ್ನೊ, ಮೇ 15: ಕಳೆದ ರಾತ್ರಿ ಉತ್ತರಪ್ರದೇಶದಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಆರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.
ಈ ಮೂರು ಪ್ರಕರಣದಲ್ಲಿ ಕಾರ್ಮಿಕರು ತಮ್ಮ ತವರು ಪಟ್ಟಣ ತಲುಪಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅಪಘಾತದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಗುಜರಾತ್ನಿಂದ ಉತ್ತರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರು ಬಾರಬಂಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ತಮ್ಮ ತವರು ಪಟ್ಟಣ ತಲುಪಲು ಸುಮಾರು 100 ಕಿ.ಮೀ.ದೂರದಲ್ಲಿದ್ದರು. ಘಟನೆಯಲ್ಲಿ ಇತರ ನಾಲ್ವರಿಗೆ ಗಂಭೀರ ಗಾಯವಾಗಿತ್ತು. ಇವರನ್ನು ಲಕ್ನೊ ಆಸ್ಪತ್ರೆಗೆ ಸೇರಿಸಲಾಗಿದೆ.
ಬಹರೈಚ್ನಲ್ಲಿ ನಡೆದಿದ್ದ ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದಿಂದ ಬರುತ್ತಿದ್ದ ವಲಸೆ ಕಾರ್ಮಿಕನ ಮೇಲೆ ನಿಯಂತ್ರಣ ಕಳೆದುಕೊಂಡ ಟ್ರಕ್ ಹರಿದ ಪರಿಣಾಮ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 32 ವಲಸೆೆ ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ.
ಜಲೌನ ಜಿಲ್ಲೆಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿರುವ ವರದಿಯಾಗಿದೆ. ನಡೆದುಕೊಂಡು, ಸೈಕಲ್ ಅಥವಾ ವಾಹನ ಮೂಲಕ ತಮ್ಮ ಊರಿಗೆ ಹೋಗುತ್ತಿರುವ ವಲಸೆ ಕಾರ್ಮಿಕರು ಸಾವನ್ನಪ್ಪುತ್ತಿರುವ ಘಟನೆ ದೇಶಾದ್ಯಂತ ಇತ್ತೀಚೆಗೆ ಪ್ರತಿನಿತ್ಯ ವರದಿಯಾಗುತ್ತಿದೆ.
ಗುರುವಾರ ಮಧ್ಯಪ್ರದೇಶದಲ್ಲಿ 8 ಹಾಗೂ ಉತ್ತರಪ್ರದೇಶದಲ್ಲಿ ಆರು ಮಂದಿ ಸಹಿತ ಒಟ್ಟು 14 ಕಾರ್ಮಿಕರು ತಮ್ಮ ಊರಿಗೆ ಹೋಗುವ ದಾರಿ ಮಧ್ಯೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕಳೆದ ವಾರ 16 ವಲಸೆ ಕಾರ್ಮಿಕರು ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿ ಕಾರ್ಗೊ ರೈಲು ಹರಿದು ಮೃತಪಟ್ಟಿದ್ದರು..