ಭಾರತೀಯ ಮೂಲದ ಚೆಫ್ ಅನ್ನು ವರಿಸಿದ್ದ ಆಸ್ಟ್ರಿಯಾ ರಾಜಕುಮಾರಿ ನಿಧನ
ಟೆಕ್ಸಾಸ್ : ಆಸ್ಟ್ರಿಯಾದ ರಾಜಕುಮಾರಿ ಮರಿಯಾ ಗಲಿಟ್ಝಿನ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಹೌಸ್ಟನ್ ನಗರದಲ್ಲಿ ಮೃತಪಟ್ಟಿದ್ದಾರೆ. ಮೂವತ್ತೊಂದು ವರ್ಷ ವಯಸ್ಸಿನ ರಾಜಕುಮಾರಿ ಎಪ್ರಿಲ್ 2017ರಲ್ಲಿ ಭಾರತೀಯ ಮೂಲದ ಖ್ಯಾತ ಎಕ್ಸಿಕ್ಯೂಟಿವ್ ಚೆಫ್ ರಿಷಿ ರೂಪ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಎರಡು ವರ್ಷದ ಪುತ್ರನಿದ್ದಾನೆ.
ರಾಜಕುಮಾರಿ ಮರಿಯಾ ಅವರು ಹೌಸ್ಟನ್ ನಗರದಲ್ಲಿ ಇಂಟೀರಿಯರ್ ಡಿಸೈನರ್ ವೃತ್ತಿಯಲ್ಲಿದ್ದರು.
ರಾಜಕುಮಾರಿ ಮರಿಯಾ ಅನ್ನಾ ಹಾಗೂ ರಾಜಕುಮಾರ ಪಿಯೋಟ್ರ್ ಗಲಿಟ್ಝಿನ್ ಅವರ ಪುತ್ರಿಯಾಗಿದ್ದ ಮರಿಯಾ ಮೇ 4ರಂದು ಮೃತಪಟ್ಟಿದ್ದಾರೆಂಬ ಮಾಹಿತಿಯಿದ್ದು ನಾಲ್ಕು ದಿನಗಳ ನಂತರ ಆಕೆಯನ್ನು ಹೌಸ್ಟನ್ ನಗರದ ಫಾರೆಸ್ಟ್ ಪಾರ್ಕ್ ವೆಸ್ಟ್ಹೀಮರ್ ದಫನಭೂಮಿಯಲ್ಲಿ ಸಮಾಧಿ ಮಾಡಲಾಗಿದೆ.
ಲಕ್ಸೆಂಬೊರ್ಗ್ ನಗರದಲ್ಲಿ 1988ರಲ್ಲಿ ಹುಟ್ಟಿದ್ದ ರಾಜಕುಮಾರಿ ಮರಿಯಾ ಮುಂದೆ ತಮ್ಮ ಐದನೇ ವರ್ಷದಲ್ಲಿ ರಷ್ಯಾಗೆ ಪ್ರಯಾಣಿಸಿದ್ದರು. ಪದವಿ ಶಿಕ್ಷಣದ ನಂತರ ಬೆಲ್ಜಿಯಂನ ಕಾಲೇಜ್ ಆಫ್ ಆರ್ಟ್ ಎಂಡ್ ಡಿಸೈನ್ಗೆ ಅವರು ಸೇರಿದ್ದರು. ಬ್ರಸ್ಸೆಲ್ಸ್, ಚಿಕಾಗೋ, ಇಲ್ಲಿನೊಯಿಸ್ ಹಾಗೂ ಹೌಸ್ಟನ್ ನಗರಗಳಲ್ಲಿ ಆಕೆ ಇಂಟೀರಿಯರ್ ಡಿಸೈನರ್ ಆಗಿ ಸೇವೆ ಸಲ್ಲಿಸಿದ್ದರು.