ಹಳೆ ವಿಡಿಯೋ ಹಾಕಿ ಮುಸ್ಲಿಮರು ಸಾಮೂಹಿಕ ನಮಾಝ್ ಮಾಡುತ್ತಿದ್ದಾರೆ ಎಂದ ಬಿಜೆಪಿ ಸಂಸದ ಪರ್ವೇಶ್
ಇದು ಹಸಿ ಸುಳ್ಳು ಎಂದ ಪೊಲೀಸ್ ಅಧಿಕಾರಿ
ಹೊಸದಿಲ್ಲಿ, ಮೇ 15: ಬಿಜೆಪಿ ಪಶ್ಚಿಮ ದಿಲ್ಲಿ ಲೋಕಸಭಾ ಕ್ಷೇತ್ರದ ಸಂಸದ ಪರ್ವೇಶ್ ವರ್ಮಾ ಹಸಿ ಸುಳ್ಳು ಹರಡಿ ಸಿಕ್ಕಿಬಿದ್ದಿದ್ದಾರೆ. ಮುಸ್ಲಿಮರು ಲಾಕ್ ಡೌನ್ ಉಲ್ಲಂಘಿಸಿ ಸಾಮೂಹಿಕ ನಮಾಝ್ ಮಾಡುತ್ತಿದ್ದಾರೆ ಎಂದು ಹಳೆಯ ವಿಡಿಯೋವೊಂದನ್ನು ಟ್ವೀಟ್ ಮಾಡಿ ಪರ್ವೇಶ್ ನಗೆಪಾಟಲಿಗೀಡಾಗಿದ್ದಾರೆ.
ಮೇ 14 ರಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಿದ ಟ್ವೀಟ್ ನಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಸೇರಿ ನಮಾಝ್ ಮಾಡುವ ಒಂದು ವಿಡಿಯೋ ಹಾಕಿ ಹಿಂದಿಯಲ್ಲಿ ಪರ್ವೇಶ್ ಹೀಗೆ ಬರೆದಿದ್ದರು : "ಯಾವುದೇ ಧರ್ಮ ಕೊರೊನ ವೈರಸ್ ನಂತಹ ಸಂದರ್ಭದಲ್ಲಿ ಇಂತಹ ಕಿಡಿಗೇಡಿತನಕ್ಕೆ ಅವಕಾಶ ನೀಡುತ್ತದೆಯೇ ? ಲಾಕ್ ಡೌನ್ ಹಾಗು ಸಾಮಾಜಿಕ ಅಂತರದ ನಿಯಮಗಳನ್ನು ಇಲ್ಲಿ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಅರವಿಂದ ಕೇಜ್ರಿವಾಲ್ ಸಂಬಳ ಹೆಚ್ಚಿಸುತ್ತಿರುವ ಮೌಲ್ವಿಗಳಿಗೆ ಆ ಸಂಬಳವನ್ನು ಕಡಿತ ಮಾಡಿದರೆ ಇಂತಹ ಕೃತ್ಯಗಳು ತನ್ನಿಂತಾನೇ ನಿಲ್ಲುತ್ತವೆ. ಅಥವಾ ಕೇಜ್ರಿವಾಲ್ ದಿಲ್ಲಿಗೆ ನಷ್ಟ ಉಂಟು ಮಾಡುವ ಪ್ರತಿಜ್ಞೆ ಮಾಡಿದಂತೆ ತೋರುತ್ತಿದೆ" ಎಂದು ತೀವ್ರ ಪ್ರಚೋದನಕಾರಿ ಹಾಗು ಅವಹೇಳನಕಾರಿ ಒಕ್ಕಣೆ ಬರೆದಿದ್ದರು.
ಆದರೆ ಪರ್ವೇಶ್ ರ ಸುಳ್ಳು ಟ್ವೀಟ್ ಕೂಡಲೇ ಬಯಲಾಗಿದೆ. ಪೂರ್ವ ದಿಲ್ಲಿಯ ಡಿಸಿಪಿ ಅವರು ಪರ್ವೇಶ್ ಟ್ವೀಟ್ ಗೆ ಪ್ರತಿಕ್ರಿಯಿಸಿ "ಇದು ಸಂಪೂರ್ಣ ಸುಳ್ಳು. ಹಳೆ ವಿಡಿಯೋವೊಂದನ್ನು ಬಳಸಿ ದುರುದ್ದೇಶಪೂರ್ವಕ ವದಂತಿ ಹರಡಲಾಗುತ್ತಿದೆ. ಹೀಗೆ ವದಂತಿ ಹರಡುವ ಟ್ವೀಟ್ ಮಾಡುವ ಮುನ್ನ ಪರಿಶೀಲಿಸಿ" ಎಂದು ಬುದ್ಧಿ ಹೇಳಿದ್ದಾರೆ. ಆದರೆ ಸುಳ್ಳು ಹರಡಿದ ಪರ್ವೇಶ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಇತರರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಅಲ್ಲಿಗೆ ಸಂಬಂಧವೇ ಇಲ್ಲದ ವಿಡಿಯೋ ಹಾಕಿ ಜನರನ್ನು ದಾರಿ ತಪ್ಪಿಸುವ ಹಾಗು ರಾಜಕೀಯ ಬೆಲೆ ಬೇಯಿಸಿಕೊಳ್ಳುವ ಬಿಜೆಪಿ ಸಂಸದ ಪರ್ವೇಶ್ ರ ಯೋಜನೆ ವಿಫಲವಾಗಿದೆ.
This is totally false. An old video is being used with a malicious intent to spread rumour.
— DCP East Delhi (@DCPEastDelhi) May 11, 2020
Please verify before posting and spreading rumours.@DelhiPolice