ಕೊರೋನ ವೈರಸ್ : ದ.ಕ. ಜಿಲ್ಲೆಯಲ್ಲಿ 16 ಪಾಸಿಟಿವ್ ; 173 ನೆಗೆಟಿವ್
ಮಂಗಳೂರು, ಮೇ 15: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಶುಕ್ರವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 189 ವರದಿಗಳ ಪೈಕಿ 16 ಪಾಸಿಟಿವ್ ಮತ್ತು 173 ನೆಗೆಟಿವ್ ಆಗಿದೆ. ಇದರಲ್ಲಿ ಮಂಗಳವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 179 ಅನಿವಾಸಿ ಕನ್ನಡಿಗರ ಪೈಕಿ 15 ಮಂದಿ ಸೇರಿದ್ದಾರೆ. ಅದಲ್ಲದೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸುರತ್ಕಲ್ ಸಮೀಪದ ಇಡ್ಯ ಗ್ರಾಮದ ಗುಡ್ಡೆಕೊಪ್ಲದ 68 ವರ್ಷ ಪ್ರಾಯದ ವೃದ್ಧೆಗೂ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಒಟ್ಟು 50 ಪ್ರಕರಣಗಳು ಪತ್ತೆಯಾದಂತಾಗಿದೆ. ಆ ಪೈಕಿ ದ.ಕ.ಜಿಲ್ಲೆಯ 44, ಕಾಸರಗೋಡಿನ 4, ಕಾರ್ಕಳದ 1, ಭಟ್ಕಳದ 1 ಪ್ರಕರಣ ಸೇರಿದೆ.
ಈವರೆಗೆ ಪತ್ತೆಯಾದ 50 ಪಾಸಿಟಿವ್‌ಗಳ ಪೈಕಿ 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, 29 ಮಂದಿ ಕೋವಿಡ್-ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎ.19ರಂದು ಮಹಿಳೆ ಮತ್ತು ಎ.23 ಹಾಗೂ ಎ.30ರಂದು ಇಬ್ಬರು ವೃದ್ಧೆಯರು, ಮೇ 13ರಂದು ಮಹಿಳೆ, ಮೇ 14ರಂದು ವೃದ್ಧೆ ಸಹಿತ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.
ಕೊರೋನ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನು ಮರಳಿ ಭಾರತಕ್ಕೆ ತರುವ ಕಾರ್ಯಾಚರಣೆಯಡಿ 179 ಮಂದಿಯನ್ನು ಒಳಗೊಂಡ ಪ್ರಥಮ ಯಾನಿಗಳ ತಂಡವು ಮಂಗಳವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಈ ವೇಳೆ ಇವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಶುಕ್ರವಾರ ಬಂದ ವರದಿಯಲ್ಲಿ 15 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಈ ಪೈಕಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು ಸೇರಿದ್ದಾರೆ.
15 ಮಂದಿ ಅನಿವಾಸಿ ಕನ್ನಡಿಗರ ಪೈಕಿ 12 ಪುರುಷರು ಮತ್ತು 3 ಮಹಿಳೆಯರಿದ್ದಾರೆ. ಈ ಪೈಕಿ 6 ವರ್ಷದ ಓರ್ವ ಬಾಲಕ ಹಾಗೂ 65, 71, 76, 81 ವರ್ಷದ ವೃದ್ಧರು ಮತ್ತು 69 ವರ್ಷದ ವೃದ್ಧೆ ಸೇರಿದ್ದಾರೆ.
ಇನ್ನೂ 155 ಮಂದಿಯ ವರದಿ ಬರಲು ಬಾಕಿ ಇದೆ. ಶುಕ್ರವಾರ 46 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರೊಂದಿಗೆ ಈವರೆಗೆ 41,141 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಸಂಚಾರ ಕ್ಲಿನಿಕ್‌ನಲ್ಲಿ 39 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ ಈವರೆಗೆ 3,300 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಎನ್‌ಐಟಿಕೆಯಲ್ಲಿ 22 ಮತ್ತು ಇಎಸ್‌ಐ ಆಸ್ಪತ್ರೆಯಲ್ಲಿ 10 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
ಈವರೆಗೆ 4,880 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 4,725 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 4,675 ಮಂದಿಯ ವರದಿಯು ನೆಗೆಟಿವ್ ಮತ್ತು 50 ಮಂದಿಯ ವರದಿಯು ಪಾಸಿಟಿವ್ ಬಂದಿದೆ.
ಇಡ್ಯ ಗ್ರಾಮದ ಗುಡ್ಡೆಕೊಪ್ಲ ಸೀಲ್ ಡೌನ್
ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದ ಸುರತ್ಕಲ್ ಸಮೀಪದ ಇಡ್ಯ ಗ್ರಾಮದ ಗುಡ್ಡೆಕೊಪ್ಲದ 68 ವರ್ಷದ ವೃದ್ಧೆಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಮಧ್ಯೆ ಗುಡ್ಡಕೊಪ್ಲ ಪ್ರದೇಶದ 100 ಮೀಟರ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೆ ಈ ಪ್ರದೇಶವನ್ನು ‘ಕಂಟೈನ್‌ಮೆಂಟ್’ ಝೋನ್ ಮತ್ತು 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್’ ರೆನ್ ಎಂದು ಘೋಷಿಸಲಾಗಿದೆ. ಈ ಪ್ರದೇಶಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ 2 ರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.
ಮುಂದಿನ 28 ದಿನಗಳ ಕಾಲ ಸೀಲ್‌ಡೌನ್ ಪ್ರದೇಶದ ಮನೆಗಳ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರುವಂತಿಲ್ಲ ಹಾಗೂ ಈ ಪ್ರದೇಶಕ್ಕೆ ಹೊರಗಿನ ಯಾರೂ ಪ್ರವೇಶಿಸುಂತಿಲ್ಲ. ಈ ಪ್ರದೇಶದ ಪ್ರತೀ ಮನೆಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯ ಕರ್ತರು ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಲ್ಲಿನ ಜನರಿಗೆ ದಿನಸಿ, ಔಷಧ ಸಹಿತ ದಿನ ಬಳಕೆಯ ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸಲು ಆಡಳಿತ ವರ್ಗ ವ್ಯವಸ್ಥೆ ಮಾಡಲಿದೆ.
ಬಫರ್ ಝೋನ್‌ನ ಮನೆಗಳಿಗೆ ಆಶಾ ಕಾರ್ಯಕರ್ತರು ಭೇಟಿ ನೀಡಿ ಮನೆಮಂದಿಯ ಆರೋಗ್ಯವನ್ನು ವಿಚಾರಿಸಲಿದ್ದಾರೆ. ಈ ಪ್ರದೇಶಗಳಲ್ಲೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಲಾಕ್‌ಡೌನ್ ಸಂದರ್ಭದಲ್ಲಿರುವ ಎಲ್ಲಾ ನಿಬಂಧನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸುರಕ್ಷಿತ ಅಂತ ಕಾಪಾಡುವುದು ಮುಂದಿನ 28 ದಿನಗಳ ಕಾಲ ಜಾರಿಯಲ್ಲಿರುತ್ತದೆ.
12,998 ವಲಸೆ ಕಾರ್ಮಿಕರು ತವರು ಜಿಲ್ಲೆಗೆ
ದ.ಕ.ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಪೈಕಿ ಈವರೆಗೆ ಉತ್ತರ ಪ್ರದೇಶ, ಬಿಹಾರ,ರಾಜಸ್ಥಾನ್, ಜಾರ್ಖಂಡ್ ರಾಜ್ಯಗಳ 12,998 ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನ ಮೂಲಕ ತವರು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಶುಕ್ರವಾರ ಕಂಕನಾಡಿ ರೈಲು ನಿಲ್ದಾಣದಿಂದ ವಲಸೆ ಕಾರ್ಮಿಕರನ್ನು ಜಾರ್ಖಂಡ್ ಮತ್ತು ಉತ್ತರ ಪ್ರದೇಶಕ್ಕೆ ಪ್ರತ್ಯೇಕ ರೈಲಿನಲ್ಲಿ ಕಳುಹಿಸಿಕೊಡಲಾಗಿದೆ.
...







