ಜೋಕಟ್ಟೆಯಲ್ಲಿ ಕಾರ್ಮಿಕ ಇಲಾಖೆ ವಿತರಿಸಿದ ಅಕ್ಕಿಯ ಮೂಲ ಯಾವುದು ? : ದ.ಕ.ಜಿಲ್ಲಾಡಳಿತಕ್ಕೆ ಡಿವೈಎಫ್‌ಐ ಪ್ರಶ್ನೆ
ಮಂಗಳೂರು, ಮೇ 15: ಜೋಕಟ್ಟೆಯಲ್ಲಿ ಕಾರ್ಮಿಕ ಇಲಾಖೆಯ ವಿತರಿಸಿದ ಅಕ್ಕಿ ಕಳಪೆ ಗುಣಮಟ್ಟದ್ದಾಗಿದ್ದು ಎಂದು ಪುನರುಚ್ಚರಿಸಿರುವ ಡಿವೈಎಫ್‌ಐ, ಕೆಪಿಟಿಯಲ್ಲಿರುವ ಗೋದಾಮಿನಿಂದ ಕಳಪೆ ಗುಣಮಟ್ಟದ ಅಕ್ಕಿ ವಿತರಣೆಯಾಗಿದೆ ಎಂದು ಎಲ್ಲೂ ಹೇಳಿಲ್ಲ. ಜೋಕಟ್ಟೆಯಲ್ಲಿ ವಲಸೆ ಕಾರ್ಮಿಕರಿಗೆ ಕಳಪೆ ಅಕ್ಕಿ ತಲುಪಿಸಿರುವುದು ಖುದ್ದು ಕಾರ್ಮಿಕ ಇಲಾಖೆಯಾಗಿದೆ. ಗೋದಾಮಿನಲ್ಲಿರುವ ಅಕ್ಕಿ ಉತ್ತಮ ದರ್ಜೆಯದ್ದೇ ಆಗಿದ್ದರೆ ಜೋಕಟ್ಟೆಯಲ್ಲಿ ಕಾರ್ಮಿಕ ಇಲಾಖೆ ವಿತರಿಸಿದ ಅಕ್ಕಿಯ ಮೂಲ ಯಾವುದು ಮತ್ತು ಆ ಅಕ್ಕಿಯು ಕಾರ್ಮಿಕ ಇಲಾಖೆಯ ಕೈಗೆ ತಲುಪಿದ್ದು ಹೇಗೆ ? ಎಂದು ಪ್ರಶ್ನಿಸಿದೆ.
ಬುಧವಾರ ಜೋಕಟ್ಟೆಯಲ್ಲಿ ವಲಸೆ ಕಾರ್ಮಿಕರಿಗೆ ವಿತರಿಸಲಾದ ಅಕ್ಕಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಡಿವೈಎಫ್‌ಐ ಆರೋಪಿಸಿತ್ತು. ಆದರೆ ಅದನ್ನು ದ.ಕ.ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಅಲ್ಲ ಗಳೆದಿತ್ತು. ಈ ಮಧ್ಯೆ ಶುಕ್ರವಾರ ಪತ್ರಕರ್ತರ ತಂಡವನ್ನು ನಗರದ ಕದ್ರಿಯಲ್ಲಿರುವ ಆಹಾರ ಇಲಾಖೆಯ ಗೋದಾಮಿಗೆ ಅಧಿಕಾರಿಗಳು ಕರೆದೊಯ್ದು ಉತ್ತಮ ಗುಣಮಟ್ಟದ ಅಕ್ಕಿಯನ್ನೇ ವಿತರಿಸಲಾಗಿದೆ ಎಂದು ಪ್ರತಿಪಾದಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜೋಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಅಕ್ಕಿಯನ್ನು ವಲಸೆ ಕಾರ್ಮಿಕರಿಗೆ ವಿತರಿಸಲಾಗಿತ್ತು. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದೇವೆ. ಈಗ ಸ್ಥಳೀಯರಿಗೂ ಇಂತಹ ಅಕ್ಕಿ ವಿತರಿಸಿರುವ ಮಾಹಿತಿ ಬರುತ್ತಿದೆ. ಜಿಲ್ಲಾಧಿಕಾರಿಗಳು ಸ್ವಚ್ಚಗೊಳಿಸಲಾದ ಗೋದಾಮನ್ನು ಮಾಧ್ಯಮಗಳಿಗೆ ಪ್ರದರ್ಶಿಸುವ ಬದಲು ಕಳಪೆ ಗುಣಮಟ್ಟದ ಅಕ್ಕಿಯ ಮೂಲ ಯಾವುದು ಎಂದು ಶೋಧಿಸಲಿ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಿ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಜಿಲ್ಲಾಧಿಕಾರಿಗಳು ಮುಂದಾಗಿ ಘನತೆ ಕಳೆದು ಕೊಳ್ಳಬಾರದು. ಯಾವುದೇ ತನಿಖೆಗೂ ಡಿವೈಎಫ್‌ಐ ಸಿದ್ದವಿದೆ. ಈ ಕುರಿತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.







