ನೇಕಾರರ ಸಮ್ಮಾನ್ ಹೊಸ ಯೋಜನೆ: ವಾರ್ಷಿಕ 2 ಸಾವಿರ ರೂ.ಗಳ ಸಹಾಯಧನ

ರಾಮನಗರ, ಮೇ 15: ಕೈಮಗ್ಗ ಮತ್ತು ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಮಗ್ಗ ನೇಕಾರಿಕೆಯ ರೇಷ್ಮೆ, ಹತ್ತಿ, ಉಣ್ಣೆ ಇತರೆ ಕೈಮಗ್ಗ ಉತ್ಪನ್ನಗಳನ್ನು ತಯಾರಿಸುತ್ತಿರುವ ನೇಕಾರರಿಗೆ ಅನುಕೂಲವಾಗುವಂತೆ ರಾಜ್ಯ ಸರಕಾರವು ನೇಕಾರರ ಸಮ್ಮಾನ್ ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯಡಿ ಕೈಮಗ್ಗ ನೇಕಾರರಿಗೆ ವಾರ್ಷಿಕವಾಗಿ 2 ಸಾವಿರ ರೂ.ಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ನೇಕಾರರಿಗೆ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಕೈಗೊಂಡಿರುವ 4ನೆ ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ ಕೈಮಗ್ಗ ಕುಟುಂಬಗಳಿರುವ ಅವಲಂಬಿತ ನೇಕಾರರನ್ನು ಗುರುತಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಈ ಯೋಜನೆಯಡಿ ಅನುದಾನವನ್ನು ನೇರವಾಗಿ ನೇಕಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯು ಕಡ್ಡಾಯವಾಗಿರುತ್ತದೆ. ಈ ಯೋಜನೆಯಡಿ ಸೌಲಭ್ಯಗಳನ್ನು ಪಡಯಲು ಜಿಲ್ಲೆಯಲ್ಲಿರುವ ನೋಂದಾಯಿತ ಕೈಮಗ್ಗ ನೇಕಾರರ ಸಹಕಾರ ಸಂಘಗಳನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳಲು ನೇಕಾರರಿಗೆ ತಿಳಿಸಲಾಗಿದೆ.
ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ ಹಾಗೂ ಗಾಳಿಮಾತಿಗೆ ಮಾನ್ಯತೆ ನೀಡದೆ ಇಲಾಖೆಯಿಂದ ಅಧಿಕೃತ ಮಾಹಿತಿಯನ್ನು ನೇರವಾಗಿ ಪಡೆಯಲು ಜಿಲ್ಲೆಯ ನೇಕಾರರಿಗೆ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಭವನ ಬಿ.ಎಂ ರಸ್ತೆ, ರಾಮನಗರ ಜಿಲ್ಲೆ, ದೂ. ಸಂಖ್ಯೆ; 080-27272288 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







