ನೈಸರ್ಗಿಕ ಕೃಷಿಯಿಂದ ಕೊರೋನಕ್ಕೆ ಪರಿಹಾರ ಸಾಧ್ಯ: ಕೃಷಿ ತಜ್ಞ ಸುಭಾಷ್ ಪಾಳೇಕಾರ್
ಬೆಂಗಳೂರು, ಮೇ 15: ಕೊರೋನ ಸಮಸ್ಯೆಗೆ ನೈಸರ್ಗಿಕ ಕೃಷಿಯಿಂದ ಪರಿಹಾರ ಸಾಧ್ಯವಿದೆ ಎಂದು ಕೃಷಿ ತಜ್ಞ ಸುಭಾಷ್ ಪಾಳೇಕಾರ್ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೃಷಿಯಲ್ಲಿ ರಾಸಾಯನಿಕ ಬಳಕೆಗಳನ್ನು ನಿಲ್ಲಿಸಿ ನೈಸರ್ಗಿಕ ಕೃಷಿಗೆ ಒತ್ತು ನೀಡುವುದರಿಂದ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಲಭ್ಯವಾಗಿ, ಕೊರೋನದಂತಹ ವೈರಸ್‍ಗಳ ವಿರುದ್ಧ ಹೋರಾಡುವಂತಹ ಶಕ್ತಿ, ಚೈತನ್ಯ ತುಂಬಬಹುದು ಎಂದು ಹೇಳಿದ್ದಾರೆ.
ಈ ಬಿಕ್ಕಟ್ಟು ತಕ್ಷಣಕ್ಕೆ ಮುಗಿಯುವಂತಹ ವಿಚಾರವಲ್ಲ. ಇದು ಮುಂದುವರಿಯಲಿದ್ದು, ಇದಕ್ಕೆ ಔಷಧಿಯೂ ಇಲ್ಲ. ಒಂದೇ ಒಂದು ಸಿದ್ಧ ಔಷಧ ಎಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಎಂದು ಅವರು ಸಂದರ್ಶನದಲ್ಲಿ ಪ್ರತಿಪಾದಿಸಿದ್ದಾರೆ.
ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ, ಸಿಲಿಂದ್ರನಾಶಕ, ಕಳೆ ನಾಶಕಗಳನ್ನು ಬಳಸಲಾಗುತ್ತಿದೆ. ಇವುಗಳು ಆಹಾರದ ಮೂಲಕ ಮನುಷ್ಯನ ದೇಹ ಸೇರುತ್ತಿವೆ. ಮನುಷ್ಯನ ದೇಹ ಸೇರಿದ ಈ ರಾಸಾಯನಿಕ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿವೆ. ಹೀಗಾಗಿ, ಇಡೀ ಜಗತ್ತು ವಿಷವಿಲ್ಲದ ಆಹಾರದ ಬಗ್ಗೆ ಚಿಂತಿಸಬೇಕಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಬೆಳೆಯಲಾಗುವ ಆಹಾರದ ಬಗ್ಗೆ ಯೋಚಿಸಬೇಕಿದೆ. ಇದೊಂದೆ ಕೊರೋನ ತಡೆಗಟ್ಟುವ ಪರಿಹಾರ ಎಂದು ನುಡಿದಿದ್ದಾರೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಯಾವ ರೋಗವೂ ಬಾಧಿಸದು. ಸರಕಾರ ಕೂಡಾ ಕೃಷಿಯಲ್ಲಿ ರಾಸಾಯನಿಕ ಬಳಕೆ ನಿಷೇಧಿಸಬೇಕು. ಬೆಳೆ ನಿರ್ವಹಣೆಯ ನೈಸರ್ಗಿಕ ಮಾದರಿಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಬೇಕು ಎಂದರು.
ರೈತರು ಸಹ ಕೃಷಿಯಲ್ಲಿ ರಾಸಾಯನಿಕ ಬಳಕೆ ನಿಲ್ಲಿಸಬೇಕು. ನೈಸರ್ಗಿಕ ವಿಧಾನಗಳಿಂದಲೇ ಆಹಾರ ಉತ್ಪಾದನೆ ಮಾಡಬೇಕು. ಆಹಾರಗಳು ರಾಸಾಯನಿಕಗಳಿಂದ ಮುಕ್ತವಾಗಿದ್ದರೆ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಸುಭಾಷ್ ಪಾಳೇಕಾರ್ ಸಲಹೆ ನೀಡಿದ್ದಾರೆ.







