ಅಂತರ್ ರಾಜ್ಯ ಗಡಿಯಿಂದ 12,025 ವಲಸಿಗ ಕಾರ್ಮಿಕರ ಆಗಮನ: ಕಲಬುರಗಿ ಜಿಲ್ಲಾಧಿಕಾರಿ ಶರತ್

ಕಲಬುರಗಿ, ಮೇ 15: ಕೊರೋನ ಲಾಕ್‍ಡೌನ್ 3.0 ಸಡಿಲಿಕೆ ಹಿನ್ನೆಲೆಯಲ್ಲಿ ಮೇ 13ರ ಸಂಜೆ ವರೆಗೆ ಬೇರೆ ರಾಜ್ಯದಲ್ಲಿ ಸಿಲುಕಿದ್ದ ಜಿಲ್ಲೆಯ 12,025 ಜನ ವಲಸಿಗ ಕಾರ್ಮಿಕರು ಜಿಲ್ಲೆಯ ಅಂತರ್ ರಾಜ್ಯ ಗಡಿಗಳಿಂದ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಖಜೂರಿ, ಹೀರೊಳ್ಳಿ, ಕಿಣ್ಣಿ ಸಡಕ್, ಬಳ್ಳೂರಗಿ, ಮಿರಿಯಾಣ ಹಾಗೂ ರಿಬ್ಬನಪಲ್ಲಿ ಗಡಿಗಳ ಮೂಲಕ ಈ ವಲಸಿಗರು ಆಗಮಿಸಿದ್ದು, ಇವರೆಲ್ಲರಿಗೂ ಗಡಿಯಲ್ಲಿಯೇ ಆರೋಗ್ಯ ತಪಾಸಣೆ ಮಾಡಿ ವಲಸಿಗರ ಊರು ಸಮೀಪದಲ್ಲಿಯೇ ಸರಕಾರಿ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಕಳೆದ ಮೇ 11ರ ರಾತ್ರಿ ಮುಂಬೈನಿಂದ ಶ್ರಮಿಕ್ ರೈಲಿನ ಮೂಲಕ 1181 ಜನ ವಲಸಿಗ ಕಾರ್ಮಿಕರು ಆಗಮಿಸಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆಯ 242 ಮತ್ತು ವಿಜಯಪುರ ಜಿಲ್ಲೆಯ 22 ವಲಸಿಗರು ಸೇರಿದ್ದಾರೆ. ಹೊರ ಜಿಲ್ಲೆಯವರಿಗೆ ಆರೋಗ್ಯ ತಪಾಸಣೆ ಮಾಡಿ ಬಸ್ ಮೂಲಕ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಶರತ್ ತಿಳಿಸಿದರು.
ಜಿಲ್ಲೆಯಲ್ಲಿ ಇದೂವರೆಗೆ 36,900 ವಲಸೆ ಕಾರ್ಮಿಕ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ. ಇದುವರೆಗೆ ಪತ್ತೆಯಾದ 81 ಕೊರೋನ ಸೋಂಕು ಪ್ರಕರಣದಲ್ಲಿ 45 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಪಿ.ರಾಜಾ, ಡಿಸಿಪಿ ಕಿಶೋರ್ ಬಾಬು, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







