ನೇಪಾಳ ಕೇವಲ ಛಾಯಾ ಪ್ರತಿಭಟನಾಕಾರ, ಅದರ ಹಿಂದಿರುವುದು ಚೀನಾ: ಸೇನಾ ಮುಖ್ಯಸ್ಥ ಜ.ನರವಾಣೆ
ನೂತನ ರಸ್ತೆ ನಿರ್ಮಾಣ ವಿವಾದ

ಹೊಸದಿಲ್ಲಿ, ಮೇ 15: ಉತ್ತರಾಖಂಡದಿಂದ ಹಿಮಾಲಯದ ಲಿಪುಲೇಖ್ ಪಾಸ್‌ವರೆಗಿನ 80 ಕಿ.ಮೀ.ಉದ್ದದ ರಸ್ತೆಯ ನಿರ್ಮಾಣಕ್ಕೆ ನೇಪಾಳದ ಆಕ್ಷೇಪವನ್ನು ಶುಕ್ರವಾರ ಇಲ್ಲಿ ಪ್ರಸ್ತಾಪಿಸಿದ ಭಾರತದ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು,ವಾಸ್ತವದಲ್ಲಿ ಭಾರತ ಮತ್ತು ನೇಪಾಳಗಳ ನಡುವೆ ಘರ್ಷಣೆಯನ್ನು ಸೃಷ್ಟಿಸುತ್ತಿರುವುದು ಚೀನಾ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.
‘ನೇಪಾಳವು ನಿಜಕ್ಕೂ ಯಾವ ಕಾರಣಕ್ಕೆ ಪ್ರತಿಭಟಿಸುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಬೇರೆಯವರ ಪ್ರಚೋದನೆಯ ಮೇರೆಗೆ ಅದು ಈ ಸಮಸ್ಯೆಯನ್ನೆತ್ತಿದೆ ಎಂದು ನಂಬಲು ಕಾರಣಗಳಿವೆ ಮತ್ತು ಇದು ಅತ್ಯಂತ ಸಂಭವನೀಯವೂ ಹೌದು ಎಂದು ಆನ್‌ಲೈನ್ ಸಮ್ಮೇಳನವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಜ.ನರವಾಣೆ ಹೇಳಿದರು.
ಕಾಳಿ ನದಿಯ ಪೂರ್ವದ ಪ್ರದೇಶವು ನೇಪಾಳಕ್ಕೆ ಸೇರಿದೆ ಮತ್ತು ಭಾರತವು ರಸ್ತೆಯನ್ನು ನದಿಯ ಪಶ್ಚಿಮದಲ್ಲಿ ನಿರ್ಮಿಸಿದೆ ಎಂದು ಅವರು ತಿಳಿಸಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕಳೆದ ವಾರ ವೀಡಿಯೊ ಲಿಂಕ್ ಮೂಲಕ ನೂತನ ರಸ್ತೆಯನ್ನು ಉದ್ಘಾಟಿಸಿದ್ದರು. ಭಾರತದೊಂದಿಗಿನ ತನ್ನ ಪಶ್ಚಿಮದ ಗಡಿಯನ್ನು ವ್ಯಾಖ್ಯಾನಿಸಿರುವ 1816ರ ಒಪ್ಪಂದವೊಂದರ ಆಧಾರದಲ್ಲಿ ಲಿಪುಲೇಖ್ ಪಾಸ್ ತನಗೆ ಸೇರಿದ್ದು ಎಂದು ನೇಪಾಳ ಹೇಳಿಕೊಳ್ಳುತ್ತಿದೆ,ಆದರೆ ಭಾರತವು ಅದರ ಈ ನಿಲುವನ್ನು ತಿರಸ್ಕರಿಸಿದೆ. ನೆರೆಯ ಕಾಲಾಪಾನಿ ಪ್ರದೇಶವೂ ತನಗೆ ಸೇರಿದ್ದು ಎಂಬ ನೇಪಾಳದ ವಾದವನ್ನೂ ಅದು ತಳ್ಳಿಹಾಕಿದೆ.







