ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ಹೊಸದಿಲ್ಲಿ : ಸತತ ಆರನೇ ದಿನವೂ ಭಾರತದಲ್ಲಿ 3500ಕ್ಕಿಂತ ಹೆಚ್ಚು ಕೊರೋನ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 85 ಸಾವಿರ ದಾಟುವ ಮೂಲಕ ಚೀನಾದಲ್ಲಿ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆಯನ್ನು ಭಾರತ ಮೀರಿದಂತಾಗಿದೆ.
ಚೀನಾದಲ್ಲಿ ವರದಿಯಾದ ಕೊರೋನ ವೈರಸ್ ಸೋಂಕಿತರ ಸಂಖ್ಯೆ 84,031. ಭಾರತದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 85786. ಶುಕ್ರವಾರ ಒಟ್ಟು 105 ಮಂದಿ ಈ ಮಾರಕ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಹೊಸದಾಗಿ 1576, ತಮಿಳುನಾಡಿನಲ್ಲಿ 434, ದೆಹಲಿಯಲ್ಲಿ 425, ಗುಜರಾತ್‌ನಲ್ಲಿ 340 ಹಾಗೂ ರಾಜಸ್ಥಾನದಲ್ಲಿ 213 ಪ್ರಕರಣಗಳು ವರದಿಯಾಗಿದ್ದು, ಇವು ಗರಿಷ್ಠ ಸಂಖ್ಯೆಯನ್ನು ದಾಖಲಿಸಿದ ರಾಜ್ಯಗಳಾಗಿವೆ. ಮೇ 10ರಂದು ದಾಖಲಾದ 4308 ಪ್ರಕರಣಗಳು ದೇಶದಲ್ಲಿ ಒಂದು ದಿನದಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳಾಗಿವೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,100ಕ್ಕೆ ತಲುಪಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 49 ಸಾವ ಸಂಭವಿಸಿದ್ದು, ಈ ಪೈಕಿ 34 ಸಾವು ಮುಂಬೈ ಮಹಾನಗರದಲ್ಲೇ ವರದಿಯಾಗಿದೆ. ಮುಂಬೈಯಲ್ಲಿ 933 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 17671ಕ್ಕೇರಿದೆ.
ಈ ಮಧ್ಯೆ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದ್ದು, ಐದು ಹೊಸ ಸಾವು ಪ್ರಕರಣ ವರದಿಯಾಗಿದೆ. ಇದುವರೆಗೆ ಒಟ್ಟು 71 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕಳೆದ ನಾಲ್ಕು ದಿನದಲ್ಲಿ 4108 ಪ್ರಕರಣಗಳು ದೃಢಪಟ್ಟಿವೆ.
ಒಡಿಶಾ ಹಾಗೂ ಜಾರ್ಖಂಡ್‌ಗೆ ವಾಪಸ್ಸಾದ ವಲಸೆ ಕಾರ್ಮಿಕರು ಸೋಂಕಿನ ಮೂಲ ಎನಿಸಿದ್ದು, ಒಡಿಶಾದಲ್ಲಿ 48 ಹಾಗೂ ಜಾರ್ಖಂಡ್‌ನಲ್ಲಿ 12 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಮೇ 5ರಿಂದೀಚೆಗೆ 11 ದಿನಗಳಲ್ಲಿ ಜಾರ್ಖಂಡ್‌ನಲ್ಲಿ 100 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 215.







