ದ್ವೇಷ ಕಮೆಂಟ್: ನ್ಯೂಝಿಲೆಂಡ್ನ ಪ್ರಮುಖ ಭಾರತೀಯನ ಸದಸ್ಯತ್ವ ವಜಾಗೊಳಿಸಿದ ವೆಲ್ಲಿಂಗ್ಟನ್ ಜಸ್ಟಿಸ್ ಆಫ್ ಪೀಸ್ ಸಂಸ್ಥೆ

ಕಾಂತಿಲಾಲ್ ಭಾಗಾಭಾಯಿ ಪಟೇಲ್ (Photo: indiannews.co.nz)
ಹೊಸದಿಲ್ಲಿ: ಮುಸ್ಲಿಂ-ವಿರೋಧಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಆರೋಪದಲ್ಲಿ ನ್ಯೂಜಿಲೆಂಡ್ನ ಭಾರತೀಯ ಮೂಲದ ಪ್ರಮುಖ ವ್ಯಕ್ತಿ ಕಾಂತಿಲಾಲ್ ಭಾಗಾಭಾಯಿ ಪಟೇಲ್ ಎಂಬವರನ್ನು ವೆಲ್ಲಿಂಗ್ಟನ್ ಜಸ್ಟಿಸ್ ಆಫ್ ಪೀಸ್ ಅಸೋಸಿಯೇಶನ್ ಸದಸ್ಯತನದಿಂದ ವಜಾಗೊಳಿಸಲಾಗಿದೆ. ಅರಬ್ ಮತ್ತು ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಹಲವು ಭಾರತೀಯ ವಲಸಿಗರು ಅವರ ಇಸ್ಲಾಂ ವಿರುದ್ಧದ ದ್ವೇಷದ ಕಮೆಂಟ್ಗಳಿಗಾಗಿ ಕ್ರಮ ಎದುರಿಸಿರುವ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಕಾಂತಿಲಾಲ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಂದ ತಮಗೆ ಆಘಾತವಾಗಿದೆ ಎಂದು ಸಂಘಟನೆಯ ಉಪಾಧ್ಯಕ್ಷೆ ಆ್ಯನ್ ಕ್ಲಾರ್ಕ್ ಹೇಳಿದ್ದಾರೆ.
ಪಟೇಲ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ವಿರುದ್ಧ ಬಂದ ದೂರುಗಳ ಬಗ್ಗೆ ಸಂಘಟನೆ ತನಿಖೆ ನಡೆಸಿರುವುದಾಗಿಯೂ ಅವರು ತಿಳಿಸಿದ್ದಾರೆ. ಈಗ ತನ್ನ ಮಾಜಿ ಸದಸ್ಯರೊಬ್ಬರ ಈ ಪೋಸ್ಟ್ ಗಳಿಗಾಗಿ ಸಂಘಟನೆ ಕ್ಷಮೆಯನ್ನೂ ಕೋರುತ್ತದೆ ಎಂದು ಅವರು ಹೇಳಿದ್ದಾರೆ.
ಕ್ರಮ ಎದುರಿಸಿರುವ ಪಟೇಲ್ ಅವರು ಈ ಹಿಂದೆ 2004ರಲ್ಲಿ ಕ್ವೀನ್ ಸರ್ವಿಸ್ ಮೆಡಲ್ ಹಾಗೂ 2005ರಲ್ಲಿ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ಪಡೆದವರಾಗಿದ್ದಾರೆ. ಅವರು ಆಕ್ಲೆಂಡ್ ಇಂಡಿಯನ್ ಅಸೋಸಿಯೇಶನ್ನ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು ವೆಲ್ಲಿಂಗ್ಟನ್ ಇಂಡಿಯನ್ ಅಸೋಸಿಯೇಶನ್ನ ಮಾಜಿ ಸಹಾಯಕ ಕಾರ್ಯದರ್ಶಿಯಾಗಿದ್ದಾರೆ.







