ಕೊರೋನ ವೈರಸ್ ಸ್ಕ್ರೀನಿಂಗ್ ವಿಚಾರದಲ್ಲಿ ಮಧ್ಯಪ್ರದೇಶದಲ್ಲಿ ಹಿಂಸಾಚಾರ: ಇಬ್ಬರು ಮೃತ್ಯು

ಭಿಂದ್(ಮಧ್ಯಪ್ರದೇಶ), ಮೇ 16: ಕೋವಿಡ್-19ನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳ ಪೈಕಿ ಒಂದಾಗಿರುವ ದಿಲ್ಲಿಯಿಂದ ಇತ್ತೀಚೆಗೆ ವಾಪಸಾಗಿದ್ದ ವ್ಯಕ್ತಿಯೊಬ್ಬನ ಸ್ಕಾನಿಂಗ್ ಬಗ್ಗೆ ಕೊರೋನ ವೈರಸ್ ತಪಾಸಣೆಗೆ ಒಳಗಾದ ಎರಡು ಗುಂಪುಗಳ ನಡುವೆ ಶುಕ್ರವಾರ ಮಧ್ಯಪ್ರದೇಶದ ಬಿಂಧ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಜಿಲ್ಲೆಯ ಪ್ರೇಮನಗರ ಪ್ರದೇಶದಲ್ಲಿ ನಡೆದ ಹೊಡೆದಾಟದಲ್ಲಿ ಓರ್ವ ಹಿರಿಯ ಮಹಿಳೆ ಸೇರಿದಂತೆ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಗಾಯವಾಗಿದೆ.
ಹಿಂಸಾಚಾರ ಭುಗಿಲೇಳಲು ಕಾರಣವಾಗಿದ್ದ ವ್ಯಕ್ತಿಗೆ ಮತ್ತೊಂದು ಗುಂಪು ಕೋವಿಡ್-19 ಟೆಸ್ಟ್‌ಗೆ ಒಳಗಾಗುವಂತೆ ಹೇಳಿತ್ತು. ನಾನು ಈಗಾಗಲೇ ಪರೀಕ್ಷೆಗೆ ಒಳಗಾಗಿದ್ದೇನೆ. ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದನ್ನು ನಂಬದ ಗುಂಪು ವಾಗ್ವಾದ ನಡೆಸಿದ ಕಾರಣ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಾಥಮಿಕ ತನಿಖಾ ವರದಿಯನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಈ ವಾರ ಎರಡನೇ ಬಾರಿ ಮಧ್ಯಪ್ರದೇಶದಲ್ಲಿ ಹಿಂಸಾಚಾರ ನಡೆದಿದೆ.





