20 ಲಕ್ಷ ಕೋಟಿ ರೂ. ಪ್ಯಾಕೇಜನ್ನು ಮರುಪರಿಶೀಲಿಸಿ, ಬಡವರ ಖಾತೆಗೆ ಹಣ ಹಾಕಿ: ರಾಹುಲ್ ಗಾಂಧಿ ಆಗ್ರಹ

ಹೊಸದಿಲ್ಲಿ, ಮೇ 16: ಕೇಂದ್ರ ಸರಕಾರ ಈಗಾಗಲೇ ಘೋಷಿಸಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್‌ನ್ನು ಮರುಪರಿಶೀಲಿಸಬೇಕು. ಕೊರೋನ ವೈರಸ್ ಹಾಗೂ ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆಗೆ ಸಿಲುಕಿರುವ ದೇಶದ ಬಡ ಜನರ ಬ್ಯಾಂಕ್ ಖಾತೆಗೆ ಸರಕಾರವು ತಕ್ಷಣ ನೇರವಾಗಿ ನಗದು ಹಣ ವರ್ಗಾಯಿಸಬೇಕು. ಇಲ್ಲದಿದ್ದರೆ ಸರಕಾರ ದುರಂತದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.
ಝೂಮ್ ವೀಡಿಯೊ ಕಾಲ್ ಮೂಲಕ ವರದಿಗಾರರೊಂದಿಗೆ ಮಾತನಾಡಿದ ರಾಹುಲ್, ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಸ್ತಾವಿಸಿದ್ದ ನ್ಯಾಯ್ ಯೋಜನೆಯನ್ನು ನೆನಪಿಸಿದರು. ಈ ಯೋಜನೆಯಡಿ ಸಮಾಜದ ಬಡ ವರ್ಗದ ಜನರಿಗೆ ವಾರ್ಷಿಕ 72,000 ರೂ. ಆದಾಯದ ಬೆಂಬಲ ಲಭಿಸುತ್ತದೆ. ಕೇಂದ್ರ ಸರಕಾರ ಕೂಡ ಈ ಯೋಜನೆಯನ್ನು ಅಳವಡಿಸಿಕೊಳ್ಳಬೇಕೆಂದು ರಾಹುಲ್ ಆಗ್ರಹಿಸಿದರು.
ಖಾಲಿ ಹೊಟ್ಟೆಯಲ್ಲಿ ಮನೆಯತ್ತ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸಿಗ ಕಾರ್ಮಿಕರಿಗೆ, ರೈತರಿಗೆ, ಸಣ್ಣ ವ್ಯಾಪಾರಿಗಳು ಹಾಗೂ ಇತರರಿಗೆ ನೀವು ಕೊಡುವ ಸಾಲದ ಅಗತ್ಯವಿಲ್ಲ. ಇಂದು ನಮ್ಮ ಬಡಜನರಿಗೆ ಹಣದ ಅಗತ್ಯವಿದೆ. ಆರ್ಥಿಕ ಪ್ಯಾಕೇಜನ್ನು ಮರುಪರಿಶೀಲನೆ ನಡೆಸಬೇಕೆಂದು ಪ್ರಧಾನಮಂತ್ರಿಗೆ ನಾನು ವಿನಂತಿಸಿಕೊಳ್ಳುತ್ತೇನೆ. ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಯನ್ನು ಪರಿಗಣಿಸಬೇಕು. ರೈತರು, ಬಡಜನರು ನಮ್ಮ ಭವಿಷ್ಯ ಇದ್ದಂತ ಎಂದು ರಾಹುಲ್ ಹೇಳಿದರು.
ತಾಯಿ ತನ್ನ ಮಕ್ಕಳಿಗೆ ತಿನ್ನಲು ಆಹಾರ ಪಡೆಯುವುದನ್ನು ಖಚಿತಪಡಿಸಲು ಏನನ್ನಾದರೂ ಮಾಡುವಂತೆ ಸರಕಾರವು ಬಡ ಜನರ ಖಾತೆಗಳಿಗೆ ಹಣ ಹಾಕಲೇಬೇಕು. ಒಂದು ವೇಳೆ ನೀವು ಇದನ್ನು ಮಾಡದೇ ಇದ್ದರೆ ದುರಂತದ ಸಮಸ್ಯೆ ಎದುರಿಸಬೇಕಾಗುತ್ತದೆ. ಬಡ ಜನರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು ಅತ್ಯಂತ ಮುಖ್ಯ ಎಂದು ರಾಹುಲ್ ಒತ್ತಿ ಹೇಳಿದರು.







