ಮಣಿಪಾಲ ಕೆಎಂಸಿಯಲ್ಲಿ ಕೋವಿಡ್-19 ಟೆಸ್ಟ್ ಲ್ಯಾಬ್ ಪ್ರಾರಂಭಕ್ಕೆ ಹಸಿರು ನಿಶಾನೆ
‘ಸೋಮವಾರ-ಮಂಗಳವಾರ ಕಾರ್ಯಾರಂಭ’

ಉಡುಪಿ, ಮೇ 16: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್-19ರ ಸೋಂಕು ಶಂಕಿತ ವ್ಯಕ್ತಿಗಳ ಗಂಟಲು ದ್ರವದ ಮಾದರಿಗಳ ಪರೀಕ್ಷೆಗಾಗಿ ಪ್ರಯೋಗಾಲಯದ ಪ್ರಾರಂಭಕ್ಕೆ ಕೇಂದ್ರ ಸರಕಾರ ಕೊನೆಗೂ ಹಸಿರು ನಿಶಾನೆ ತೋರಿಸಿದೆ.
ಕೆಎಂಸಿಯಲ್ಲಿ ಈಗಾಗಲೇ ಸುಸಜ್ಜಿತ, ಅತ್ಯಂತ ಆಧುನಿಕ ವೈರಾಲಜಿ ಪರೀಕ್ಷಾ ಪ್ರಯೋಗಾಲಯವಿದ್ದು, ಇದರಲ್ಲಿ ನೋವೆಲ್ ಕೊರೋನ ವೈರಸ್‌ನ ಪರೀಕ್ಷೆಗೆ ಇದೀಗ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮತಿಯನ್ನು ನೀಡಿದೆ. ಕಳೆದ ಗುರುವಾರ ಐಸಿಎಂಆರ್‌ನಿಂದ ಅಧಿಕೃತ ಪರವಾನಿಗೆ ಪತ್ರ ಬಂದಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
‘ನಮ್ಮಲ್ಲಿ ಈಗಾಗಲೇ ಸುಸಜ್ಜಿತ ಪ್ರಯೋಗಾಲಯವಿದೆ. ಕೊರೋನ ಟೆಸ್ಟ್‌ಗೆ ಕೆಲವು ಉಪಕರಣಗಳನ್ನು ಜೋಡಿಸಿಕೊಳ್ಳಬೇಕಾಗಿದೆ. ಹೀಗಾಗಿ ಮುಂದಿನ ಸೋಮವಾರ-ಮಂಗಳವಾರದ ಸುಮಾರಿಗೆ ಈ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ. ಇಲ್ಲಿ ಅರ್ಧದಿನದೊಳಗೆ ಫಲಿತಾಂಶ ಪಡೆಯಲು ಸಾಧ್ಯವಿದೆ.’ ಎಂದು ಅವರು ತಿಳಿಸಿದರು.
ಇನ್ನು ಮುಂದೆ ಉಡುಪಿ ಜಿಲ್ಲೆಯ ಎಲ್ಲಾ ಕೊರೋನ ಶಂಕಿತ ಮಾದರಿಗಳನ್ನು ಇಲ್ಲೇ ಪರೀಕ್ಷೆಗೊಳಪಡಿಸಿ, ಆಯಾ ದಿನ ಇಲ್ಲವೇ ಮರುದಿನದೊಳಗೆ ಫಲಿತಾಂಶ ಪಡೆಯಲು ಸಾಧ್ಯವಿದೆ. ಇದುವರೆಗೆ ಜಿಲ್ಲೆಯ ಸ್ಯಾಂಪಲ್‌ಗಳನ್ನು ಶಿವಮೊಗ್ಗ, ಬೆಂಗಳೂರು, ಹಾಸನ ಹಾಗೂ ಇತ್ತೀಚೆಗೆ ಮಂಗಳೂರಿಗೆ ಕಳುಹಿಸಬೇಕಾಗಿತ್ತು. ಇದರಿಂದ ಕೆಲವೊಮ್ಮೆ 3-4 ದಿನಗಳ ವಿಳಂಬವಾಗಿ ವರದಿ ಕೈಸೇರುತ್ತಿತ್ತು.
ಎರಡು ತಿಂಗಳ ಹಿಂದೆಯೇ ಕೆಎಂಸಿ ಪ್ರಯೋಗಾಲಯದ ಪ್ರಾರಂಭಕ್ಕೆ ಐಸಿಎಂಆರ್ ಅನುಮತಿಯನ್ನು ನೀಡಿತ್ತು. ಆದರೆ ನಿಗೂಢ ಕಾರಣಗಳಿಗಾಗಿ ಕೇವಲ ಎರಡು ದಿನಗಳಲ್ಲೇ ಅದನ್ನು ಹಿಂದಕ್ಕೆ ಪಡೆಯಲಾಗಿತ್ತು.
ಸರಕಾರಿ ಪ್ರಯೋಗಾಲಯಕ್ಕೆ ಸಿದ್ಧತೆ: ಈ ನಡುವೆ ರಾಜ್ಯ ಆರೋಗ್ಯ ಇಲಾಖೆ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೋವಿಡ್-19 ಪರೀಕ್ಷೆಗಾಗಿ ಸುಸಜ್ಜಿತ ಪ್ರಯೋಗಾಲಯದ ಆರಂಭಕ್ಕೆ ಸಿದ್ಧತೆಗಳನ್ನು ನಡೆಸುತಿದ್ದೆ. ಇದಕ್ಕಾಗಿ ಕಟ್ಟಡದ ಸಿದ್ಧತೆ, ಸುಣ್ಣಬಣ್ಣ ಬಳಿಯುವ ಕೆಲಸ ನಡೆಯುತಿದ್ದು, ಸುಸಜ್ಜಿತ ಉಪಕರಣಗಳಿಗೂ ಆರ್ಡರ್ ಸಲ್ಲಿಸಲಾಗಿದೆ. ಈ ತಿಂಗಳ ಕೊನೆಯೊಳಗೆ ಈ ಪ್ರಯೋಗಾಲಯವೂ ಕಾರ್ಯಾರಂಭಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.







