ಅಂತರ್‌ಜಿಲ್ಲಾ ಬಸ್ ಸೇವೆ ಮತ್ತೆ ಆರಂಭಿಸಿದ ಮೊದಲ ರಾಜ್ಯ ಇದು

ಹೊಸದಿಲ್ಲಿ,ಮೇ6: ಕೊರೋನ ವೈರಸ್ ಲಾಕ್‌ಡೌನ್‌ನಿಂದ ರಾಜ್ಯದ ವಿವಿಧೆಡೆ ಸಿಲುಕಿರುವ ಜನರ ಓಡಾಡುವುದಕ್ಕೆ ಅನುಕೂಲ ಮಾಡಿಕೊಡಲು ಹರ್ಯಾಣ ಸರಕಾರ ಶುಕ್ರವಾರದಿಂದ ಅಂತರ್ ಜಿಲ್ಲಾ ಸಾರ್ವಜನಿಕ ಸಾರಿಗೆಯನ್ನು ಮತ್ತೆ ಆರಂಭಿಸಿದೆ. ಈ ಮೂಲಕ ಸಾರ್ವಜನಿಕ ಸಾರಿಗೆಯನ್ನು ಮತ್ತೆ ಆರಂಭಿಸಿದ ಮೊದಲ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ನಾವು ಹಲವು ಜನರನ್ನು ಇತರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದೇವೆ. ನಮ್ಮ ಜನರು ರಾಜ್ಯದ ಹಲವು ಕಡೆಗಳಲ್ಲಿ ಪ್ರಯಾಣದ ವ್ಯವಸ್ಥೆ ಇಲ್ಲದೆ ಸಿಲುಕಿಕೊಂಡಿರುವುದು ಗೊತ್ತಾಯಿತು. ಹೀಗಾಗಿ ಅಂತರ್‌ಜಿಲ್ಲಾ ಬಸ್ ಸೇವೆಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಹರ್ಯಾಣ ಪೊಲೀಸ್ ಮುಖ್ಯಸ್ಥ ಮನೋಜ್ ಯಾದವ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಅಂತರ್‌ಜಿಲ್ಲಾ ಬಸ್‌ಗಳಿಗೆ ಕೇವಲ ಗಮ್ಯಸ್ಥಾನದಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಬೇರೆ ಎಲ್ಲೂ ನಿಲುಗಡೆ ಇರುವುದಿಲ್ಲ. ಟಿಕೆಟ್‌ಗಳ ಅಗತ್ಯವಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು.ಕಳೆದ ಒಂದು ವಾರದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.





