ಶ್ರಮಿಕ ರೈಲುಗಳ ಕುರಿತು ಕೇಂದ್ರ, ರಾಜ್ಯಗಳ ನಡುವೆ ವಾಕ್ಸಮರ

ಹೊಸದಿಲ್ಲಿ: ವಲಸಿಗ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಿ ಕೊಡಲು ಆರಂಭಿಸಲಾಗಿರುವ ಶ್ರಮಿಕ ವಿಶೇಷ ರೈಲುಗಳ ಕುರಿತಂತೆ ಕೇಂದ್ರ ಮತ್ತು ಕೆಲ ರಾಜ್ಯ ಸರಕಾರಗಳ ನಡುವೆ ವಾದವಿವಾದ ಮುಂದುವರಿದಿದೆ. ಈ ರೈಲುಗಳು ತಮ್ಮ ರಾಜ್ಯಗಳಿಗೆ ಆಗಮಿಸಲು ಪಶ್ಚಿಮ ಬಂಗಾಳ ಜಾರ್ಖಂಡ್, ಛತ್ತೀಸಗಢ ಮತ್ತು ರಾಜಸ್ಥಾನ ಸರಕಾರಗಳು ಅನುಮತಿಸಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯೆಲ್ ಆರೋಪಿಸಿದ್ದಾರೆ. ಅವರು ಹೆಸರಿಸಿರುವ ರಾಜ್ಯಗಳೆಲ್ಲವೂ ವಿಪಕ್ಷಗಳು ಆಡಳಿತಗಳಿರುವ ರಾಜ್ಯಗಳಾಗಿದ್ದು ಇದೀಗ ಈ ರಾಜ್ಯ ಸರಕಾರಗಳು ಸಚಿವರ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿ ಮಾತನಾಡಿದ ಗೋಯೆಲ್, ಈ ರಾಜ್ಯದ ನಿವಾಸಿಗಳಾಗಿರುವ ಹಾಗೂ ದೇಶದ ವಿವಿಧೆಡೆಗಳಲ್ಲಿರುವ 30,000ರಿಂದ 50,000 ವಲಸಿಗ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಬಯಸಿದ್ದಾರೆಂದರಲ್ಲದೆ ರಾಜ್ಯ ಸರಕಾರ ಮಾತ್ರ ಇವರನ್ನು ವಾಪಸ್ ಕರೆತರಲು ರೈಲುಗಳಿಗೆ ಬೇಡಿಕೆಯಿಡುವಲ್ಲಿ ನಿಧಾನಗತಿ ತೋರಿಸಿವೆ ಎಂದು ದೂರಿದ್ದಾರೆ.
"ಮುಂದಿನ 30 ದಿನ ಅವಧಿಯಲ್ಲಿ 105 ರೈಲುಗಳಿಗೆ ಅನುಮತಿಸಲು ಪಶ್ಚಿಮ ಬಂಗಾಳವು ಹೆಚ್ಚಿನ ಇತರ ಮಾಹಿತಿ ನೀಡದೆ ತಿಳಿಸಿದೆ. ಮುಂದಿನ 15-20 ದಿನಗಳ ಕಾಲ 100 ರೈಲುಗಳನ್ನು ಪಶ್ಚಿಮ ಬಂಗಾಳಕ್ಕೆ ಓಡಿಸಿದರೆ ಮಾತ್ರ ಈ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಬಹುದು,'' ಎಂಬ ಸಚಿವರ ವೀಡಿಯೋ ಹೇಳಿಕೆಯನ್ನು ಎಎನ್‍ಐ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದೆ.
ಪಶ್ಚಿಮ ಬಂಗಾಳದ ನಿಧಾನಗತಿಯಿಂದಾಗಿ ಶೇ 5ರಿಂದ ಶೇ 7ರಷ್ಟು ವಲಸಿಗ ಕಾರ್ಮಿಕರು ಮನೆಗಳನ್ನು ತಲುಪಬಹುದು, ಉಳಿದವರು ರಸ್ತೆಗಳಲ್ಲಿ ನಡೆದುಕೊಂಡು, ಸೈಕಲ್‍ಗಳಲ್ಲಿ, ಟ್ರಕ್‍ಗಳಲ್ಲಿ ಹೋಗಬಹುದು, ಹಲವಾರು ಅಪಘಾತಗಳೂ ನಡೆಯಬಹುದು,'' ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗುರುವಾರ ಟ್ವೀಟ್ ಮಾಡಿ ದೇಶದ ವಿವಿಧೆಡೆಗಳಿಂದ ಪಶ್ಚಿಮ ಬಂಗಾಳಕ್ಕೆ ಬರಲಿರುವ 105 ರೈಲುಗಳ ತಾತ್ಕಾಲಿಕ ವೇಳಾಪಟ್ಟಿ ಪೋಸ್ಟ್ ಮಾಡಿದ್ದರು.
ಗೋಯೆಲ್ ಅವರ ಹೇಳಿಕೆ ನಿರಾಧಾರ ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದು ತಮ್ಮ ಸರಕಾರ 30 ರೈಲುಗಳಿಗೆ ಬೇಡಿಕೆಯಿಟ್ಟಿದ್ದು 14 ರೈಲುಗಳಿಗೆ ಅನುಮತಿ ದೊರಕಿದೆ. ನಾವು ಈ ರೈಲುಗಳಿಗೆ ರೂ 1.17 ಕೋಟಿ ಪಾವತಿಸಿದ್ದೇವೆ ಎಂದರು.
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಪ್ರತಿಕ್ರಿಯಿಸಿ ತಮ್ಮ ರಾಜ್ಯ 110 ರೈಲುಗಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ಸಲ್ಲಿಸಿದೆ. ಇಲ್ಲಿಯ ತನಕ 50 ರೈಲುಗಳು ರಾಜ್ಯ ತಲುಪಿವೆ ಹಾಗೂ 60,000 ವಲಸಿಗರು ವಾಪಸಾಗಿದ್ದಾರೆ, ಎಂದರು.
ರಾಜಸ್ಥಾನ ಸರಕಾರ ಯಾವುದೇ ರೈಲಿಗೆ ಅನುಮತಿ ನೀಡುವುದನ್ನು ಬಾಕಿಯಿರಿಸಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.







