ಕೊರೋನ ಸಮಸ್ಯೆಯಿಂದಾಗಿ ಭಾರತದಲ್ಲಿ ಶೇ. 71ರಷ್ಟು ಶಸ್ತ್ರಕ್ರಿಯೆಗಳು ಮುಂದೂಡುವ, ರದ್ದಾಗುವ ಸಾಧ್ಯತೆ: ವರದಿ

ಹೊಸದಿಲ್ಲಿ : ಭಾರತದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ನಡೆಸಲುದ್ದೇಶಿಸಲಾಗಿರುವ ಶೇ. 71ರಷ್ಟು, ಅಂದರೆ 5.8 ಲಕ್ಷಕ್ಕೂ ಅಧಿಕ ಶಸ್ತ್ರಕ್ರಿಯೆಗಳು ಕೊರೋನವೈರಸ್ ಸಮಸ್ಯೆಯಿಂದಾಗಿ 12 ವಾರಗಳ ಕಾಲ ಮುಂದೂಡಬಹುದಾಗಿದೆ ಇಲ್ಲವೇ ರದ್ದುಗೊಳ್ಳಬಹುದಾಗಿದೆ ಎಂದು ಬ್ರಿಟಿಷ್ ಜರ್ನಲ್ ಆಫ್ ಸರ್ಜರಿ ನಡೆಸಿದ ಅಧ್ಯಯನ ತಿಳಿಸಿದೆ.
ಕೊರೋನವೈರಸ್ ಹಾವಳಿಯ ವೇಳೆ ಶಸ್ತ್ರಕ್ರಿಯೆ ನಡೆಸಿದಲ್ಲಿ ರೋಗಿಗಳಲ್ಲಿ ಸೋಂಕು ಹರಡುವಿಕೆಯ ಅಪಾಯ ಹೆಚ್ಚುವುದರಿಂದ ಶಸ್ತ್ರಕ್ರಿಯೆ ವಿಳಂಬಿಸುವುದರಿಂದ ಉಂಟಾಗುವ ಅಪಾಯಕ್ಕಿಂತ ಶಸ್ತ್ರಕ್ರಿಯೆ ನಡೆಸಿದರೇ ಹೆಚ್ಚು ಅಪಾಯವುಂಟಾಗುವುದನ್ನು ಪರಿಗಣಿಸಬೇಕಾಗುತ್ತದೆ, ಆದುದರಿಂದ ರೋಗಿಗಳಿಗೆ ಮುಂದೆ ಸುರಕ್ಷಿತ ಶಸ್ತ್ರಕ್ರಿಯೆ ನಡೆಸುವ ಕುರಿತಂತೆ ಸರಕಾರಗಳು ಯೋಚಿಸಬೇಕಿದೆ,'' ಎಂದು ಅಧ್ಯಯನ ತಿಳಿಸಿದೆ.
ಅತ್ಯಗತ್ಯವಲ್ಲದ ಶಸ್ತ್ರಕ್ರಿಯೆಗಳ ಪೈಕಿ ಶೇ 80ರಷ್ಟು, ಅಂದರೆ 5,05,864ರಷ್ಟು ಶಸ್ತ್ರಕ್ರಿಯೆ ಪ್ರಕ್ರಿಯೆಗಳು ರದ್ದುಗೊಳ್ಳಬಹುದು ಅಥವಾ ಮುಂದೂಡಲಾಗುವ ಸಾಧ್ಯತೆಯಿದ್ದು ಕ್ಯಾನ್ಸರ್ ಶಸ್ತ್ರಕ್ರಿಯೆಗಳ ಪೈಕಿ ಶೇ 60ರಷ್ಟು ಅಥವಾ 51,134 ಶಸ್ತ್ರಕ್ರಿಯೆಗಳು ಹಾಗೂ ಮೂಳೆ ಸಂಬಂಧಿ ಶೇ 30ರಷ್ಟು ಅಥವಾ 27,740 ಶಸ್ತ್ರಕ್ರಿಯೆಗಳು ಮುಂದೂಡುವ ಸಾಧ್ಯತೆಗಳಿವೆ, ಎಂದು ವರದಿ ಹೇಳಿದೆ.
ಈ ರೀತಿಯಾಗಿ 5,56,998 ಶಸ್ತ್ರಕ್ರಿಯೆಗಳು ಬಾಕಿಯಾಗಿ ಹಾಗೂ ಶಸ್ತ್ರಕ್ರಿಯೆಗಳ ಸಂಖ್ಯೆ ಶೇ 10ರಷ್ಟು ಏರಿಕೆಯಾದಲ್ಲಿ ಎಲ್ಲಾ ಶಸ್ತ್ರಕ್ರಿಯೆಗಳನ್ನು ಪೂರ್ಣಗೊಳಿಸಲು 93 ವಾರಗಳೇ ತಗಲಬಹುದು ಎಂದು ವರದಿ ತಿಳಿಸಿದೆ.







