ಎಲ್‍ಕೆಜಿ-ಯುಕೆಜಿ ಮಕ್ಕಳಿಗೆ ಆನ್‍ಲೈನ್ ಪಾಠ ಮಾಡುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್

ಬೆಂಗಳೂರು, ಮೇ 16: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಣದಾಸೆಗೆ ಎಲ್‍ಕೆಜಿ-ಯುಕೆಜಿ ಮಕ್ಕಳಿಗೆ ಆನ್‍ಲೈನ್ ಮೂಲಕ ಪಾಠ ಮಾಡಲು ಪ್ರಾರಂಭಿಸಿವೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಎಲ್‍ಕೆಜಿ, ಯುಕೆಜಿ ಕಂದಮ್ಮಗಳಿಗೂ ಆನ್‍ಲೈನ್ ಶಿಕ್ಷಣ ಕೊಡುವಂತಹ ಮನಸ್ಥಿತಿಗೆ ಏನನ್ನಬೇಕು. ಕೆಲವು ಶಾಲಾ ಆಡಳಿತ ಮಂಡಳಿಗಳು ಹಣದ ಆಸೆಗೆ ಬಿದ್ದು, ಮಕ್ಕಳನ್ನು ಕಂಪ್ಯೂಟರ್, ಮೊಬೈಲ್ ಮುಂದೆ ಕೂರಿಸಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್‍ಕೆಜಿ, ಯುಕೆಜಿ ಸೇರಿದಂತೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣದ ಅಗತ್ಯವಿಲ್ಲ. ಆದರೂ ಕೆಲವು ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಶಿಕ್ಷಣವನ್ನು ಕೊಡುತ್ತೇವೆಂದು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಶೋಷಿಸುತ್ತಿರುವುದು ಕಂಡುಬಂದಿದೆ. ಇಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.





