ಲೇಖಕಿ ಅಕ್ಷತಾ ಕೃಷ್ಣಮೂರ್ತಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

ಉಡುಪಿ, ಮೇ 16: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಣಿಪಾಲ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-2020 ನಾಡಿನ ಖ್ಯಾತ ಬರಹಗಾರ್ತಿ ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಲಭಿಸಿದೆ. ಪ್ರಶಸ್ತಿಯು 10,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಪ್ರಶಸ್ತಿ ಆಯ್ಕೆ ಸಮಿತಿಯು ಅಕ್ಷತಾ ಕೃಷ್ಣಮೂರ್ತಿ ಅವರ ‘ನಾನು ದೀಪ ಹಚ್ಚಬೇಕೆಂದಿದ್ದೆ’ ಎಂಬ ಅಪ್ರಕಟಿತ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಥೆ, ಕಾದಂಬರಿಕಾರ, ನಾಟಕಕಾರ, ಪತ್ರಿಕೋದ್ಯಮಿ ಹೀಗೆ ಕನ್ನಡ ಸಾರಸ್ವತ ಲೋಕದ ಹತ್ತು ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಸಂಯೋಜಕ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯವರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಆಣಶಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಹಿಂದಿ ರತ್ನ ಪದವಿಯನ್ನು ರಾಜ್ಯದಲ್ಲಿ ನಾಲ್ಕನೇ ಸ್ಥಾನದೊಂದಿಗೆ ಪಡೆದಿರುತ್ತಾರೆ. ಇವರ ಹಲವಾರು ಕೃತಿಗಳು ಈಗಾಗಲೇ ಪ್ರಕಟ ಗೊಂಡಿವೆ. ಇವುಗಳಲ್ಲಿ ಹನ್ನೆರಡು ದಡೆ ಬೆಲ್ಲ, ಕೋಳ್ಗಂಬ (ಕವನಸಂಕಲನ) ಹಾಲಕ್ಕಿ ಒಕ್ಕಲಿಗರು (ಜನಾಂಗೀಯ ಬರಹ) ಮಧುರಚನ್ನ (ವ್ಯಕ್ತಿ ಪರಿಚಯ), ಕೇದಿಗೆಯ ಕಂಪು (ವಿಮರ್ಶಾಕೃತಿ), ಹಾಲಕ್ಕಿ ಕೋಗಿಲೆ (ಸಂಪಾದಿತ ಕೃತಿ) ಮುಖ್ಯವಾದುವು.
ನಾಡಿನ ಪ್ರಮುಖ ಪತ್ರಿಕೆ, ನಿಯತಕಾಲಿಕಗಳಲ್ಲಿ ಇವರ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಇವರಿಗೆ ಸಂಕ್ರಮಣ ಕಾವ್ಯ ಪ್ರಶಸ್ತಿ, ಡಾ. ಡಿ. ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಯುವ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ, ಅನುಪಮಾ ನಿರಂಜನ ಕಥಾ ಬಹುಮಾನ, ಉತ್ತಮ ಶಿಕ್ಷಕಿ ಪ್ರಶಸ್ತಿಗಳು ಲಭಿಸಿವೆ.







