ಸಿಬಿಎಸ್‌ಇ: ಪರೀಕ್ಷಾ ವೇಳಾಪಟ್ಟಿ ಸೋಮವಾರ ಪ್ರಕಟ

ಹೊಸದಿಲ್ಲಿ, ಮೇ 16: ಸಿಬಿಎಸ್‌ಇಯ 10 ಮತ್ತು 12ನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷೆಯ ವೇಳಾಪಟ್ಟಿಯನ್ನು ಮೇ 18ರಂದು ಪ್ರಕಟಿಸುವುದಾಗಿ ಮಾನವ ಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಇನ್ನಷ್ಟು ತಾಂತ್ರಿಕ ಅಂಶಗಳತ್ತ ಗಮನ ಹರಿಸಬೇಕಿದೆ. ಆದ್ದರಿಂದ ಮೇ 18ರಂದು ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಜುಲೈ 1ರಿಂದ 15ರೊಳಗೆ ಪ್ರಮುಖ 29 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ಈ ಹಿಂದೆ ತಿಳಿಸಿತ್ತು. ಈ ವರ್ಷ ಸಿಬಿಎಸ್‌ಇ ಪರೀಕ್ಷೆ ಎರಡು ಬಾರಿ ಮುಂದೂಡಿಕೆಯಾಗಿದೆ. ಈಶಾನ್ಯ ದಿಲ್ಲಿಯ ಮೌಜ್‌ಪುರ-ಬಾಬರ್‌ಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರದಿಂದಾಗಿ ಮೊದಲ ಬಾರಿ ಹಾಗೂ ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಎರಡನೇ ಬಾರಿ ಪರೀಕ್ಷೆ ಮುಂದೂಡಿಕೆಯಾಗಿದೆ.
Next Story





