ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಾವಿನ ಹೆಚ್ಚಳ: ಜನತೆಗೆ ವಿವರಣೆ ನೀಡಿ; ಜಿಲ್ಲಾಡಳಿತಕ್ಕೆ ಶಾಸಕ ಖಾದರ್ ಆಗ್ರಹ

ಮಂಗಳೂರು, ಮೇ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆಯಿದ್ದರೂ 5ಮಂದಿ ಸಾವನ್ನಪ್ಪಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಜಿಲ್ಲೆಯ ವೈದ್ಯಕೀಯ ತಂಡ ಸುಸಜ್ಜಿತವಾಗ್ದಿರೂ ಇಷ್ಟೊಂದು ಸಂಖ್ಯೆಯಲ್ಲಿ ಸಾವು ಸಂಭವಿಸಿರುವ ಬಗ್ಗೆ ಐಸಿಎಂಆರ್ ಸೇರಿದಂತೆ ತಜ್ಞ ಸಂಸ್ಥೆಗಳಿಂದ ವಿವರಣೆಯನ್ನು ಒದಗಿಸಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕರಾಗಿುವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿದ ಅವರು, ಕೊರೋನ ಸಾವು ಪ್ರಕರಣಗಳ ಬಗ್ಗೆ ಜಿಲ್ಲಾಡಳಿತ ಇನ್ನೂ ಗಂಭೀರವಾಗಿ ಪರಿಗಣಿ ಸಿದಂತಿಲ್ಲ. ಹೀಗೆ ಮುಂದುವರಿದರೆ ಮುಂದಿನ ತಿಂಗಳು ಜಿಲ್ಲೆಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34 ಪ್ರಕರಣ ಇರುವಾಗಲೇ 5ಮಂದಿ ಮೃತಪಟ್ಟಿರುವುದು ನಿಜಕ್ಕೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ವೈಲ್ಯತೆಯನ್ನು ವ್ಯಕ್ತಪಡಿಸುತ್ತದೆ. ಜಿಲ್ಲಾಡಳಿತದಲ್ಲಿ ತಪಾಸಣೆ, ನೆಗೆಟಿವ್, ಪಾಸಿಟಿವ್, ಸಾವು ಹೊರತುಪಡಿಸಿದರೆ ಬೇರೆ ಯಾವುದೇ ಮಾಹಿತಿ ಇಲ್ಲ. ಕಾಂಗ್ರೆಸ್‌ನಿಂದ ಇದು ಟೀಕೆ ಅಲ್ಲ. ರೋಗಕ್ಕೆ ವ್ಯಾಕ್ಸಿನ್ ನೀಡುವಂತೆ, ಇದನ್ನು ಸರಕಾರಕ್ಕೆ ನೀಡುವ ಪ್ರೀತಿಯ ಎಚ್ಚರಿಕೆಯಾಗಿ ಪರಿಗಣಿಸಬೇಕು ಎಂದರು.
ಜಿಲ್ಲಾಡಳಿತಕ್ಕೆ ಇನ್ನೂ ಆಸ್ಪತ್ರೆಯ ಕೊರೊನಾ ಮೂಲ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್ ಅವಧಿ, ವಲಸೆ ಕಾರ್ಮಿಕರು, ವಿದೇಶದಿಂದ ಆಗಮನ, ಕ್ವಾರಂಟೈನ್, ಮಾರ್ಕೆಟ್ ಶಿಪ್ಟ್ ವಿಷಯದಲ್ಲಿ ಜಿಲ್ಲಾಡಳಿತ ಗೊಂದಲದ ತಿರ್ಮಾನಗಳನ್ನೇ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಆದೇಶ ಪಾಲಿಸಲು ಕೆಲವರು ಬಿಡುತ್ತಿಲ್ಲ ಎಂದು ಅವರು ಆರೋಪಿಸಿದರು.
ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಜಿಡಿಪಿಯ ಶೇ.10 ಪ್ಯಾಕೇಜ್ ನಿಡುತ್ತಿದ್ದು, ಅದೇ ಮಾದರಿಯಲ್ಲಿ ಕೇಂದ್ರ ಸರಕಾರ 20ಲಕ್ಷ ಕೋಟಿ ಪ್ಯಾಕೇಜ್ ನೀಡಿದೆ. ಆದರೆ ಇಲ್ಲ ಸಾಲದ ಕಂತು ಕಟ್ಟಲು ವಿನಾಯಿತಿ ಬಗ್ಗೆ ಹೇಳಿದ್ದಾರೆಯೇ ಹೊರತು ಬಡ್ಡಿ ಮನ್ನಾ ಮಾಡಿಲ್ಲ. ಪ್ಯಾಕೇಜ್‌ನಲ್ಲಿ ಸಾಲ ಪಡೆ ಯಲು ಸೂಚಿಸಲಾಗಿದೆ. ಸರಕಾರಗಳು ಪತ್ರಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಾಮ ಸಹಾಯಕಿಯರಿಗೆ, ಬಸ್ ಸಿಬ್ಬಂದಿ, ಟೈಲರ್‌ಗಳಿಗೆ, ಛಾಯಾಗ್ರಾಹಕರಿಗೆ, ಲ್ಯಾಬ್ ಟೆಕ್ನಿಷಿಯನ್‌ಗಳಿಗೂ ಪ್ಯಾಕೇಜ್ ಘೋಷಣೆ ಮಾಲಿ ಎಂದವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಕೊರೊನಾದಿಂದ ಜನತೆ ಈಗ ತುಂಬಾ ಸಂಕಷ್ಟದಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ 15ಲಕ್ಷ ರೂ. ನೀಡುವುದು ಬೇಡ, ಕನಿಷ್ಠ 15ಸಾವಿರ ನೀಡಿದರೆ ಜನ ಖುಷಿಯಾಗ್ತಾರೆ. ಈ ಮೂಲಕ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಲಿ ಎಂದರು.
ಜಿಲ್ಲಾಡಳಿತ ಸಮರ್ಪಕ ವ್ಯವಸ್ಥೆ ಮಾಡದ ಕಾರಣ ಸಾವಿರಾರು ವಲಸೆ ಕಾರ್ಮಿಕರು ತಮ್ಮ ತಾಯ್ನೆಡಿಗೆ ಕಾಲ್ನಡಿಗೆ ತೆರಳುತ್ತಿದ್ದ ಸಂದರ್ಭ ಬಂಟ್ವಾಳ ಬಂಟರ ಸಂಘ ಮತ್ತು ಉಳ್ಳಾಲದ ಅಜ್ರತ್ ಮದನಿ ಶಾಲೆಯೊಂದು ಅವರನ್ನು ಮನವೊಲಿಸಿ ಅವರಿಗೆ ಮೂಲ ಸೌಕರ್ಯ ನೀಡಿತ್ತು. ಇಂತಹ ಸಂಸ್ಥೆಗಳಿಗೆ ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಕೋವಿಡ್ ಟಾಸ್ಕ್‌ಪೋಸ್ ಅಧ್ಯಕ್ಷ ಸುಬೋದಯ ಆಳ್ವ, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು.
ಕರಾವಳಿಯ ಕನ್ನಡಿಗರು ಮರಳಲು ಸಂಸದರು ಪ್ರಯತ್ನಿಸಲಿ
ಕರಾವಳಿಯ ಲಕ್ಷಾಂತರ ಮಂದಿ ವಿದೇಶದಲ್ಲಿದ್ದಾರೆ. ಆದುದರಿಂದ ಕೇಂದ್ರ ಸರಕಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಡೆಗಣಿಸುವುದು ಸರಿಯಲ್ಲ. ಕೇರಳಕ್ಕೆ 25ಕ್ಕೂ ಅಧಿಕ ವಿಮಾನ ಬರುತ್ತಿದೆ, ಮಂಗಳೂರಿಗೆ ಕೇವಲ 2 ವಿಮಾನ ಮಾತ್ರ ಬರುತ್ತಿರುವುದು ಖೇದಕರ ಎಂದು ಖಾದರ್ ಹೇಳಿದರು.
ಕೇಂದ್ರದಲ್ಲಿ ಸದಾನಂದ ಗೌಡ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಬಲಿಷ್ಠ ಲೀಡರುಗಳು ನಮ್ಮಲಿದ್ದಾರೆ. ಆದರೆ ಬಲಿಷ್ಠ ಲೀಡರ್‌ಗಳಿದ್ದರೆ ಸಾಕಾಗಲ್ಲ, ಅದರಿಂದ ಕರಾವಳಿಗೆ ಪ್ರಯೋಜನವಾಗಬೇಕು. ಈಗಾಗಲೇ ಆಗಮಿಸಿದ ಒಂದು ವಿಮಾನ ಕೂಡಾ ಕೇಂದ್ರ ಸಚಿವ ಸದಾನಂದ ಗೌರ ಮುತುವರ್ಜಿ ಮೇರೆಗೆ ಬಂದಿದೆ. ಇನ್ನುಳಿದಂತೆ ಗಲ್ಫ್ ರಾಷ್ಟ್ರಗಳಾದ ಕುವೈತ್, ಬಹರೈನ್, ಕತಾರ್, ಮಸ್ಕತ್‌ನಿಂದ ಮಂಗಳೂರಿಗೆ ಕನ್ನಡಿಗರು ಆಗಮಿಸಬೇಕಾಗಿದೆ. ಅದಕ್ಕೆ ವ್ಯವಸ್ಥೆ ಆಗಬೇಕು. ನಮ್ಮ ಸಂಸದರು ಪಕ್ಷದ ರಾಜ್ಯಾಧ್ಯಕ್ಷರು. ಅವರು ಕಾರ್ಪೊರೇಟರ್ ರೀತಿಯಲ್ಲಿ ಕಿಟ್ ಕೊಡುವುದನ್ನು ಬಿಟ್ಟು ಈ ಬಗ್ಗೆ ಕಾರ್ಯಾಚರಿಸಲಿ ಎಂದು ಮಾಜಿ ಸಚಿವ ಖಾದರ್ ಹೇಳಿದರು.
ಸಾಲ ಪ್ಯಾಕೇಜ್ ಆಗದು: ಹರೀಶ್ ಕುಮಾರ್
ಮಂಗಳೂರು: ಮೋದಿ ಸರಕಾರ 20ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವುದು ಜೋಕ್ ಆ್ ದಿ ಇಯರ್ ಮಾತ್ರವೇ ಹೊರತು ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಟೀಕಿಸಿದ್ದಾರೆ.
ಪ್ಯಾಕೇಜ್ ಅಂದರೆ ನೆರವು. ಆದರೆ ಕೇಂದ್ರ ಘೋಷಿಸಿರುವುದರಲ್ಲಿ ಬಹುಪಾಲು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಯೋಜನೆಗಳಾಗಿವೆ. ಇದು ಪ್ಯಾಕೇಜ್ ಹೇಗಾಗುತ್ತದೆ. ಜನ್‌ಧನ್, ರೈತ ಸಮ್ಮಾನ್, ಎನ್‌ಆರ್‌ಜಿ ಯೋಜನೆಯನ್ನೆಲ್ಲ ಒಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಸರಕಾರ ಪ್ಯಾಕೇಜ್ ನಲ್ಲಿ ಸಾಲದ ಬಗ್ಗೆ ಘೋಷಣೆ ಮಾಡಿದೆ. ಈ ತೆರನಾದ ಸಾಲ ರೂಪದ ಪ್ಯಾಕೇಜ್‌ನಿಂದ ಜನರಿಗೆ ಯಾವುದೇ ಪ್ರಯೋಜನವಾಗದು. ರಾಹುಲ್ ಗಾಂಧಿಯವರು ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಜನರ ಕೈಗೆ ನೇರ ಹಣ ಸಿಗುವಂತಹ ‘ನ್ಯಾಯ್’ ಯೋಜನೆ ಪ್ರಸ್ತಾಪ ಮಾಡಿದ್ದರು. ಆದರೆ ಜನ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಪ್ರಧಾನಿ ಮೋದಿಯವರ ಪ್ಯಾಕೇಜ್‌ನಲ್ಲಿ ಅಂತಹ ಯಾವುದೇ ಯೋಜನೆ ಕಾಣುತ್ತಿಲ್ಲ ಎಂದರು.







