ಬ್ಯಾರಿ ಅಕಾಡಮಿಯಿಂದ ಸಾಹಿತಿ-ಕಲಾವಿದರಿಗೆ ನೆರವು
ಮಂಗಳೂರು, ಮೇ 16:ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಬ್ಯಾರಿ ಸಾಹಿತಿ-ಕಲಾವಿದರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಆರ್ಥಿಕ ಸಹಾಯಧನ ನೀಡಿದೆ.
ಅಕಾಡಮಿಯ ಮನವಿಗೆ ಸ್ಪಂದಿಸಿ ಅರ್ಜಿ ಸಲ್ಲಿಸಿದವರ ಪೈಕಿ ಬ್ಯಾರಿ ಜಾನಪದ (ದಫ್, ಬುರ್ದಾ ಉಸ್ತಾದರು/ಕಲಾವಿದರು) 124, ಸಾಹಿತ್ಯ ಕ್ಷೇತ್ರ 52, ನಾಟಕ ಕಲಾವಿದರು 19, ಸಂಗೀತ ಹಾಗೂ ಗಾಯಕರು 62 ಹೀಗೇ ಒಟ್ಟು 257 ಮಂದಿ ಬ್ಯಾರಿ ಕ್ಷೇತ್ರದ ಅರ್ಹ ಫಲಾನುಭವಿಗಳ ಖಾತೆಗೆ ತಲಾ 2,000 ರೂ. ನೇರ ಜಮೆಯಾಗಿದೆ.
ಆಧಾರ್ ಸಂಖ್ಯೆ ನೀಡಲು ಒಪ್ಪದವರಿಗೆ ನಿಯಾಮಾನುಸಾರ ನೆರವು ನೀಡಲು ಸಾಧ್ಯವಾಗಿಲ್ಲ. ಅಲ್ಲದೆ ಬೇರೆ ಬೇರೆ ರೀತಿಯ ಪಿಂಚಣಿ ಪಡೆಯುವವರು ಈ ಯೋಜನೆಯಿಂದ ಹೊರಗುಳಿಯುತ್ತಾರೆ.ಇನ್ನೂ ಸುಮಾರು 300 ಮಂದಿ ಮದರಂಗಿ ಹಚ್ಚುವ ಕಲಾವಿದರಿಗೂ ಈ ಯೋಜನೆ ವಿಸ್ತರಿಸಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಈಗಾಗಲೇ 140 ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ರೇಶನ್ ಕಿಟ್ ಮನೆ ಮನೆಗೆ ತೆರಳಿ ವಿತರಿಸಲಾಗಿದೆ. ಇದಕ್ಕೆ ಸಹಕಾರ ನೀಡಿದ ಸಚಿವ ಸಿ.ಟಿ ರವಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಜನ್ನು, ನಿರ್ದೇಶಕ ಎಸ್. ರಂಗಪ್ಪ, ಜಂಟಿ ನಿರ್ದೇಶಕರಾದ ಅಶೋಕ್ ಎನ್. ಚಲವಾದಿ, ಚೆನ್ನೂರ್, ಸಹಾಯಕ ನಿರ್ದೇಶಕ ರಾಜೇಶ್, ರಿಜಿಸ್ಟ್ರಾರ್ ಪೂರ್ಣಿಮಾ ಅವರಿಗೆ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಭಿನಂದನೆ ಸಲ್ಲಿಸಿದ್ದಾರೆ.





