ಕಲಬುರಗಿಯ ಕಾರ್ಮಿಕರ ವಾಪಸ್ಸಿಗೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಪ್ರಿಯಾಂಕ್ ಖರ್ಗೆ

ಕಲಬುರಗಿ, ಮೇ 16: ಬೇರೆ ಕಡೆಗೆ ಕೆಲಸ ಹುಡುಕಿಕೊಂಡು ಹೋಗಿರುವ ಕಲಬುರಗಿ ಜಿಲ್ಲೆಯ ಕಾರ್ಮಿಕರನ್ನು ವಾಪಸ್ ಕರೆತರುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದ್ದು, ಸೂಕ್ತ ನಿರ್ದೇಶನ ನೀಡುವಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮೂಲಭೂತ ಹಕ್ಕು ಪ್ರತಿಪಾದಿಸುವ ಸಂವಿಧಾನದ ಕಲಂ 14, 19 ಹಾಗೂ 21ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಹೊರರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ದುಡಿಯುವ ಇತರೆ ವರ್ಗದ ಜನರನ್ನು ವಾಪಸ್ ಕಲಬುರಗಿಗೆ ಕರೆತರುವ ವಿಚಾರದಲ್ಲಿ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ವಹಿಸಿದೆ ಎಂದಿದ್ದಾರೆ.
ಜಿಲ್ಲೆಯ ಕಾರ್ಮಿಕರನ್ನು ವಾಪಸ್ ಕರೆತರುವಂತೆ ಮೂರು ಬಾರಿ ಸಿಎಂಗೆ ಪತ್ರ ಬರೆದಿದ್ದೆ. ಆದರೆ, ವಲಸಿಗರ ವಾಪಸ್ಸಾತಿಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹೀಗಾಗಿ, ವಲಸೆ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಊಟ ಹಾಗೂ ಇತ್ಯಾದಿ ಮೂಲಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ರಿಟ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಾವು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ, ಕಲಬುರ್ಗಿ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.







