ಮೈಸೂರು: ಡಾ.ಆನಂದ್ ತೇಲ್ತುಂಬ್ಡೆ ಲೇಖನ ಓದಿ 'ನ್ಯಾಯ ದಿನ' ಆಚರಿಸಿದ ದಸಂಸ

ಮೈಸೂರು,ಮೇ.16: ಮಾನವ ಹಕ್ಕುಗಳ ಹೋರಾಟಗಾರ ಪ್ರಗತಿಪರ ಚಿಂತಕ ಡಾ.ಆನಂದ್ ತೇಲ್ತುಂಬ್ಡೆ ಅವರ ಬಂಧನವನ್ನು ವಿರೋಧಿಸಿ ಮತ್ತು ಡಾ.ಆನಂದ್ ತೇಲ್ತುಂಬ್ಡೆ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ದಸಂಸ, ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಎಸ್‍ಯುಟಿಐ ಸಂಘಟನೆಗಳ ವತಿಯಿಂದ ಮೇ.16ರ ಶನಿವಾರ ನ್ಯಾಯದ ದಿನವನ್ನಾಗಿ ಆಚರಿಸಲಾಯಿತು.
ನಗರದ ನ್ಯಾಯಾಲಯದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರಮುಖರು ಆನಂದ್ ತೇಲ್ತುಂಬ್ಡೆ ಅವರ ಬಂಧನವಾಗಿ ಒಂದು ತಿಂಗಳು ಕಳೆಯುತ್ತಿದೆ. ಅವರ ಬಿಡುಗೆಡೆ ಆಗಿಲ್ಲ, ಆದರೂ ನಾವೆಲ್ಲರೂ ಅವರ ಬೆಂಬಲಕ್ಕಿದ್ದೇವೆ ಎಂದು ಹೇಳಿ ಆನಂದ್ ತೇಲ್ತುಂಬ್ಡೆ ಅವರ ಲೇಖನಗಳನ್ನು ಓದುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಡಾ.ಆನಂದ್ ತೇಲ್ತುಂಬ್ಡೆ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ನ್ಯಾಯ ದಿನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ಮೈಸೂರು ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಶಂಭುಲಿಂಗಸ್ವಾಮಿ, ಅಭಿರುಚಿ ಗಣೇಶ್, ವಕೀಲ ಪುನೀತ್, ದೊಡ್ಡಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.





