ಬಿಹಾರ: ಕ್ವಾರಂಟೈನ್ ಕೇಂದ್ರದಲ್ಲಿ ನೀರಿಗಾಗಿ ಹೊಡೆದಾಟ
ಸಮಸ್ಟಿಪುರ,ಮೇ 17: ಬಿಹಾರದ ಒಂದು ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇಡಲಾಗಿದ್ದ ಸುಮಾರು 150ರಷ್ಟಿದ್ದ ಜನರು ನೀರಿಗಾಗಿ ಹೊಡೆದಾಡಿಕೊಂಡಿರುವ ಘಟನೆ ವರದಿಯಾಗಿದೆ. ಸರಕಾರ ನಡೆಸುತ್ತಿರುವ ಇಂತಹ ಕ್ವಾರಂಟೈನ್ ಕೇಂದ್ರಗಳಲ್ಲಿ ವ್ಯವಸ್ಥೆಗಳ ಕೊರತೆ ಇದೆ ಎಂಬ ದೂರುಗಳು ಕೇಳಿಬರುತ್ತಿವೆ.
ರಾಜ್ಯ ರಾಜಧಾನಿ ಪಾಟ್ನಾದಿಂದ 120 ಕಿ.ಮೀ.ದೂರದಲ್ಲಿರುವ ಸಮಸ್ಟಿಪುರ ಜಿಲ್ಲೆಯ ಪುಲ್ಹಾರ ಪಟ್ಟಣದಲ್ಲಿ ಜನರು ಸುರಕ್ಷಿತ ಅಂತರದ ನಿಯಮವನ್ನು ಉಲ್ಲಂಘಿಸಿ ಕಟ್ಟಡದಿಂದ ಹೊರಬಂದು ನೀರಿಗಾಗಿ ಹೊಡೆದಾಡುತ್ತಿರುವ ಸುಮಾರು 6 ನಿಮಿಷಗಳ ವೀಡಿಯೊ ವೈರಲ್ ಆಗಿದೆ. ಸಮಸ್ಟಿಪುರದ ಸರಕಾರಿ ಶಾಲೆಯೊಂದನ್ನು ಕೊರೋನ ವೈರಸ್ ಸೆಂಟರ್ ಆಗಿ ತಾತ್ಕಾಲಿಕವಾಗಿ ಪರಿವರ್ತಿಸಲಾಗಿದೆ. ಶಾಲೆಯ ಮೈದಾನದಲ್ಲಿ ಜಮಾಯಿಸಿದ್ದ ಜನರು ನೀರಿನ ಟ್ಯಾಂಕರ್ ಬಂದ ಬಳಿಕ ಪರಸ್ಪರ ಹೊಡೆದಾಡಿಕೊಳ್ಳಲು ಆರಂಭಿಸಿದರು.
ಬಿಹಾರದಲ್ಲಿ ಈ ತನಕ 1000ಕ್ಕೂ ಅಧಿಕ ಕೊರೊನ ವೈರಸ್ ಪ್ರಕರಣಗಳು ವರದಿಯಾಗಿದೆ. ಪಂಚಾಯತ್ ಹಾಗೂ ಬ್ಲಾಕ್ ವಲಯಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಬ್ಲಾಕ್ ಮಟ್ಟದಲ್ಲಿ ಸುಮಾರು 3.5 ಲಕ್ಷ ಜನರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಕಳಪೆ ಆಹಾರದ ಬಗ್ಗೆ ಜನರು ಈ ಹಿಂದೆಯೇ ದೂರಿದ್ದರು.