ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ರಾಜ್ಯಗಳ ನಿರ್ಧಾರದಿಂದ ಆಘಾತ: ಅಝೀಂ ಪ್ರೇಮ್ ಜಿ
ಕಾರ್ಮಿಕ ಹಕ್ಕುಗಳ ಪರ ಧ್ವನಿ ಎತ್ತಿದ ವಿಪ್ರೋ ಸಂಸ್ಥಾಪಕ
ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ನಿರ್ಧಾರ ಕೈಗೊಂಡಿರುವುದು ಆಘಾತ ತಂದಿದೆ ಎಂದು ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ ಜಿ ಹೇಳಿದ್ದಾರೆ.
ಎಕನಾಮಿಕ್ ಟೈಮ್ಸ್ ನಲ್ಲಿ ಬರೆದ ಅಂಕಣದಲ್ಲಿ ಪ್ರೇಮ್ ಜಿಯವರು, ಈಗಾಗಲೇ ಸಡಿಲವಾಗಿರುವ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
“ಔರಂಗಾಬಾದ್ನಲ್ಲಿ ರೈಲಿನ ಅಡಿಯಲ್ಲಿ ಸಿಕ್ಕಿ ವಲಸೆ ಕಾರ್ಮಿಕರು ಜೀವ ಕಳೆದುಕೊಂಡ ಘಟನೆ, ಲಕ್ಷಾಂತರ ಮಂದಿ ಕಡುಬಡವ ಮತ್ತು ದುರ್ಬಲ ಸಹ ನಾಗರಿಕರು ಎದುರಿಸುತ್ತಿರುವ ಸಂಕಷ್ಟಗಳ ಪೈಕಿ ಒಂದು”ಎಂದು ಬಣ್ಣಿಸಿದ್ದಾರೆ.
“ಇದು ನಮ್ಮ ಬದುಕಿನ ವಾಸ್ತವ. ಹಲವು ರಾಜ್ಯ ಸರ್ಕಾರಗಳು ವಹಿವಾಟುಗಳಿಂದ ಉತ್ತೇಜಿತರಾಗಿ, ಕಾರ್ಮಿಕರನ್ನು ರಕ್ಷಿಸುವ ಹಲವು ಕಾನೂನುಗಳನ್ನು ಅಮಾನತುಗೊಳಿಸಲು ನಿರ್ಧರಿಸಿರುವುದು ನಿಜಕ್ಕೂ ಆಘಾತಕಾರಿ. ಕೈಗಾರಿಕಾ ವ್ಯಾಜ್ಯ ನಿರ್ಣಯ, ವೃತ್ತಿ ಸುರಕ್ಷೆ, ಕಾರ್ಮಿಕರ ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿ, ಕನಿಷ್ಠ ವೇತನ, ಕಾರ್ಮಿಕ ಸಂಘಟನೆ, ಗುತ್ತಿಗೆ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೆ ಸಮಬಂಧಿಸಿದ ಕಾನೂನುಗಳು ಇದರಲ್ಲಿ ಸೇರಿವೆ”ಎಂದು ವಿವರಿಸಿದ್ದಾರೆ.