ಮೇ 31ಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕಾರ ಸಾಧ್ಯತೆ
ಮೇ 19ರಿಂದ ಮುಂಚೂಣಿ ಮುಖಂಡರ ಸರಣಿ ಸಭೆ: ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಬೆಂಗಳೂರು, ಮೇ 17: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ.ಶಿವಕುಮಾರ್ ಅವರು ಇದೇ ತಿಂಗಳ 31ಕ್ಕೆ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ದೃಷ್ಟಿಯಿಂದ ಮೇ 19ರಿಂದ ಮೇ 23ರ ವರೆಗೆ ಪಕ್ಷದ ವಿವಿಧ ಮುಂಚೂಣಿ ಘಟಕಗಳ ಮುಖಂಡರ ಸರಣಿ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಕೊರೋನ ವೈರಸ್ ಸೋಂಕಿನಿಂದ ಆಗಿರುವ ನಾಲ್ಕನೆ ಹಂತದ ಲಾಕ್‍ಡೌನ್ ಸಡಿಲಿಕೆ ಸಾಧ್ಯತೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮತ್ತು ವಿವಿಧ ಘಟಕಗಳ ಬಲವರ್ಧನೆಗೆ ಕಾಂಗ್ರೆಸ್ ಮುಂದಾಗಿದೆ. ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪಕ್ಷದ ಹಿರಿಯ ಮತ್ತು ಕಿರಿಯರು ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಪಕ್ಷದ ಪುನರ್ ಸಂಘಟನೆ ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟನೆಗೆ ಮುಂದಾಗಲು ಸೂಕ್ತ ಸಲಹೆ-ಸೂಚನೆ ನೀಡುವ ದೃಷ್ಟಿಯಿಂದ ಮೇ 19ರ ಬೆಳಗ್ಗೆ 11ಕ್ಕೆ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ(ಕೆಪಿಸಿಸಿ ಮಾಜಿ ಉಸ್ತುವಾರಿ ಪದಾಧಿಕಾರಿಗಳ) ಮತ್ತು ಮಧ್ಯಾಹ್ನ 3ಗಂಟೆಗೆ ಕೆಪಿಸಿಸಿಯಿಂದ ನೇಮಕಗೊಂಡ ವಿಧಾನಸಭಾ ಕ್ಷೇತ್ರಗಳ ಸಂಯೋಜಕರ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮೇ 20ಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಪಕ್ಷದ ಅಭ್ಯರ್ಥಿಗಳ ಮತ್ತು ಮಧ್ಯಾಹ್ನ ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರು, ಮಾಜಿ ಸಂಸದರು ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿದ ಅಭ್ಯರ್ಥಿಗಳ ಸಭೆ ಜರುಗಲಿದೆ. ಮೇ 21ಕ್ಕೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರು, ಮಧ್ಯಾಹ್ನ ಯುವ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಘಟಕ ಅಧ್ಯಕ್ಷರ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೇ 22ರಂದು 2018ಕ್ಕಿಂತ ಹಿಂದಿನ ಮಾಜಿ ಶಾಸಕರು, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪರಾಜಿತ ಅಭ್ಯರ್ಥಿಗಳು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಎಲ್ಲ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆ ಸೇರಲಿದ್ದಾರೆ. ಮೇ 23ರಂದು ಬೆಳಗ್ಗೆ ಕೆಪಿಸಿಸಿ ಸದಸ್ಯರ ಸಭೆ ನಡೆಯಲಿದ್ದು, ಇತರ ಸಭೆಗಳಲ್ಲಿ ಪಾಲ್ಗೊಂಡ ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಲೀಂ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪಕ್ಷ ಸಂಘಟನೆ ಮತ್ತು ಬಲವರ್ಧನೆಗಾಗಿ ಮೇ 19ರಿಂದ ಮೇ 23ರ ವರೆಗೆ ಪಕ್ಷದ ವೀಕ್ಷಕರು, ಚುನಾವಣೆಗಳಲ್ಲಿ ಪರಾಜಿತ ಅಭ್ಯರ್ಥಿಗಳು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಎಲ್ಲ ಮುಂಚೂಣಿ ಘಟಕಗಳ ಮುಖಂಡರ ಸಭೆ ಕರೆಯಲಾಗಿದ್ದು, ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳು ನಡೆಯಲಿವೆ'
-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ