ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಿಸಿದ್ದ ಆದೇಶ ಹಿಂದೆಗೆದುಕೊಂಡ ಉ.ಪ್ರ.ಸರಕಾರ
ಹೈಕೋರ್ಟ್ ನೋಟಿಸ್ ನಂತರ ಕ್ರಮ
ಲಕ್ನೋ, ಮೇ 17: ತಯಾರಿಕಾ ಘಟಕಗಳಲ್ಲಿ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸಿದ್ದ ತನ್ನ ಆದೇಶವನ್ನು ಉತ್ತರ ಪ್ರದೇಶ ಸರಕಾರವು ಹಿಂದೆಗೆದುಕೊಂಡಿದೆ. ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯವು ಸರಕಾರಕ್ಕೆ ನೋಟಿಸನ್ನು ಹೊರಡಿಸಿದ್ದು, ಅದರ ಮರುದಿನವೇ ಈ ಬೆಳವಣಿಗೆ ನಡೆದಿದೆ.
ಆದರೆ ಉತ್ತರ ಪ್ರದೇಶ ಸರಕಾರವು ತನ್ನ ಆದೇಶವನ್ನು ಹಿಂದೆಗೆದುಕೊಂಡಿರುವುದಕ್ಕೂ ಸುರಕ್ಷತೆ ಸಂಬಂಧಿತ ನಿಯಮಗಳು, ಸಕಾಲದಲ್ಲಿ ವೇತನ ಪಾವತಿ, ಕನಿಷ್ಠ ವೇತನ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿಯ ಎಲ್ಲ 38 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಲಿರುವ ಉದ್ದೇಶಿತ ಅಧ್ಯಾದೇಶಕ್ಕೂ ಸಂಬಂಧವಿಲ್ಲ.
ದೈನಂದಿನ ಕೆಲಸದ ಅವಧಿಯನ್ನು ಎಂಟರಿಂದ 10 ಗಂಟೆಗಳಿಗೆ ಹೆಚ್ಚಿಸಲು ಈ ಅಧ್ಯಾದೇಶವು ಉದ್ದೇಶಿಸಿದೆ.
ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ, ಗೋವಾ, ಮಧ್ಯಪ್ರದೇಶ್, ಉತ್ತರಾಖಂಡ, ಅಸ್ಸಾಂ, ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಕೆಲಸದ ಅವಧಿಯನ್ನು ಎಂಟರಿಂದ 12 ಗಂಟೆಗಳಿಗೆ ಹೆಚ್ಚಿಸಿವೆ.
ಭಾರತವು ಕೆಲಸದ ಅವಧಿ ಕುರಿತಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ 1919ರ ನಿರ್ಣಯಕ್ಕೆ ಅಂಕಿತ ಹಾಕಿದೆ. ಈ ನಿರ್ಣಯಕ್ಕೆ ಅಂಕಿತ ಹಾಕಿರುವ ಎಲ್ಲ ದೇಶಗಳು ಕೆಲಸದ ಅವಧಿಯನ್ನು ವಾರಕ್ಕೆ 48 ಗಂಟೆಗಳಿಗೆ ಇಳಿಸಬೇಕಾಗುತ್ತದೆ. ಆದರೆ ಭಾರತಕ್ಕೆ ವಿನಾಯಿತಿಯನ್ನು ನೀಡಲಾಗಿದ್ದು,ಕೆಲಸದ ಅವಧಿಯನ್ನು 60 ಗಂಟೆಗಳಿಗೆ ನಿಗದಿಗೊಳಿಸಬಹುದು. ಹೀಗಾಗಿ ರಾಜ್ಯ ಸರಕಾರಗಳ ಕ್ರಮವೂ ಈ ನಿರ್ಣಯವನ್ನು ಉಲ್ಲಂಘಿಸಿದೆ.
ಉ.ಪ್ರ.ಸರಕಾರವು ಫ್ಯಾಕ್ಟರಿಗಳ ಕಾಯ್ದೆಯಡಿ ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಂದ 72 ಗಂಟೆಗಳಿಗೆ ವಿಸ್ತರಿಸಿ ಮೇ 8ರಂದು ಆದೇಶ ಹೊರಡಿಸಿತ್ತು.