'ನವಲಿ' ಬಳಿ ಪರ್ಯಾಯ ಜಲಾಶಯ: ಡಿಪಿಆರ್ ತಯಾರಿಸಲು 14.30 ಕೋಟಿ ರೂ.ಬಿಡುಗಡೆ
ಬೆಂಗಳೂರು, ಮೇ 17: ತುಂಗಭದ್ರಾ ಜಲಾಶಯನದ ನೀರಿನ ಸಂಗ್ರಹಣಾ ಸಾಮರ್ಥ್ಯ ಸಮಸ್ಯೆ ನೀಗಿಸಲು `ನವಲಿ' ಬಳಿ ಪರ್ಯಾಯ ಜಲಾಶಯ ನಿರ್ಮಾಣದ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕರ್ನಾಟಕ ನೀರಾವರಿ ನಿಗಮಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.
ಪ್ರಸ್ತುತ ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ 130 ಟಿಎಂಸಿ ಇದ್ದರೂ, 31 ಟಿಎಂಸಿಯಷ್ಟು ನೀರು ಶೇಖರಣೆಯಷ್ಟು ಹೂಳು ತುಂಬಿರುವ ಕಾರಣ ಕನಿಷ್ಠ 30 ಟಿಎಂಸಿಯಷ್ಟು ನೀರು ವ್ಯರ್ಥವಾಗುತ್ತಿತ್ತು. ಆ ನೀರನ್ನು ಹಿಡಿದಿಟ್ಟು ಸಮರ್ಪಕವಾಗಿ ಬಳಕೆ ಮಾಡಲು ಮುಂದಾಗಿರುವ ಜಲಸಂಪನ್ಮೂಲ ಇಲಾಖೆ ಹೊಸದಾಗಿ ಸಮತೋಲನ ಜಲಾಶಯ ನಿರ್ಮಾಣ ಮಾಡುವ ನೂತನ ಯೋಜನೆ ರೂಪಿಸಿದೆ.
ನವಲಿ ಗ್ರಾಮದ ಹತ್ತಿರ ಹೊಸದಾಗಿ ಸಮತೋಲನ ಜಲಾಶಯ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸಲು 14.30 ಕೋಟಿ ರೂ.ಮೊತ್ತದ ಅನುದಾನ ಬಿಡುಗಡೆ ಮಾಡಲು ಜಲಸಂಪನ್ಮೂಲ ಇಲಾಖೆಗೆ ಸರಕಾರ ಆದೇಶ ಮಾಡಿದೆ.
ಬರದ ಸಮಸ್ಯೆ ನೀಗಿಸಲು ಮತ್ತು ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಪರ್ಯಾಯ ಸಮತೋಲನ ಜಲಾಶಯದ ಅಗತ್ಯತೆಯನ್ನು ಮನಗಂಡು ಡಿಪಿಆರ್ ಸಮೀಕ್ಷೆಗೆ ಹಣ ಬಿಡುಗಡೆ ಮಾಡುವ ಅನುಮೋದನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ.
ರೈತ ಪರ ಕಾಳಜಿಯುಳ್ಳ ಸಿಎಂ ನೀರಾವರಿ ಯೋಜನೆಗಳ ಜಾರಿಗೆ ಬದ್ಧರಾಗಿದ್ದು, ಹೂಳು ತುಂಬಿದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಮಸ್ಯೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಂಪುಟದಲ್ಲಿ ಚರ್ಚಿಸಿ ಅನುಮತಿ ನೀಡಿದ್ದಾರೆ. ರೈತರ ನೀರಾವರಿ ಅಗತ್ಯತೆ ಜಲಾಶಯದ ನೀರು ಶೇಖರಣಾ ಸಾಮರ್ಥ್ಯ ಹೆಚ್ಚಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಅವರು ಹೇಳಿದ್ದಾರೆ.