ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಲಾಕ್‌ಡೌನ್ ಮೇ 31ರವರೆಗೆ ವಿಸ್ತರಣೆ

ಮುಂಬೈ, ಮೇ 17: ಕೊರೋನ ವೈರಸ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಲಾಕ್‌ಡೌನ್ ಮೇ 31ರವರೆಗೂ ಮುಂದುವರಿಯಲಿದೆ.
ದೇಶದಲ್ಲಿ 3ನೇ ಹಂತದ ಲಾಕ್‌ಡೌನ್ ಮೇ 17ಕ್ಕೆ ಮುಕ್ತಾಯವಾಗಿದೆ. ಆದರೆ ರಾಜ್ಯದಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿರುವ ಕಾರಣ ಲಾಕ್‌ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಹಂತ ಹಂತವಾಗಿ ಲಾಕ್‌ಡೌನ್‌ನಿಂದ ವಿನಾಯಿತಿ, ಲಾಕ್‌ಡೌನ್ ರದ್ದತಿ ಕುರಿತು ಮುಂದಿನ ದಿನದಲ್ಲಿ ಸೂಚನೆ ನೀಡಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಅಜಯ್ ಮೆಹ್ತಾ ಹೇಳಿದ್ದಾರೆ. ದೇಶದ ಒಟ್ಟು ಕೊರೋನ ಸೋಂಕು ಪ್ರಕರಣದಲ್ಲಿ ಸುಮಾರು ಮೂರನೇ ಒಂದು ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಮೇ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೋನ ಸೋಂಕಿತರ ಪ್ರಮಾಣ 50,000 ತಲುಪುವ ನಿರೀಕ್ಷೆಯಿದೆ.
ಈ ಮಧ್ಯೆ, ತಮಿಳುನಾಡಿನಲ್ಲಿ 25 ಜಿಲ್ಲೆಗಳಲ್ಲಿ ಅಂತರ್‌ರಾಜ್ಯ ಸಂಚಾರಕ್ಕೆ ಅವಕಾಶದೊಂದಿಗೆ ಲಾಕ್‌ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಿದ್ದು ಚೆನ್ನೈ ಸಹಿತ 12 ಇತರ ಜಿಲ್ಲೆಗಳಲ್ಲಿ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳೇ ಮುಂದುವರಿಯಲಿವೆ ಎಂದು ರಾಜ್ಯದ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ಉನ್ನತ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಬಾರ್‌ಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳಿಗೆ ಸಾರ್ವಜನಿಕರ ಭೇಟಿಗೆ ಇರುವ ನಿರ್ಬಂಧ ಮುಂದುವರಿಯಲಿದೆ. 3ನೇ ಹಂತದ ಲಾಕ್‌ಡೌನ್ ಸಂದರ್ಭ ನೀಡಲಾಗಿರುವ ಕೆಲವು ವಿನಾಯಿತಿಗಳು ಮುಂದುವರಿಯಲಿವೆ . ಕೊಯಂಬತ್ತೂರು, ಸೇಲಂ, ಇರೋಡ್, ತಿರುಪುರ, ನಮಕ್ಕಲ್, ಕರೂರ್ ಸಹಿತ 25 ಜಿಲ್ಲೆಗಳಲ್ಲಿ ಅಂತರ್‌ಜಿಲ್ಲಾ ಬಸ್ಸು ಸಂಚಾರ ಆರಂಭವಾಗಲಿದೆ. ಖಾಸಗಿ ಮತ್ತು ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು ಟಿಎನ್-ಇ ಪಾಸ್‌ನ ಅಗತ್ಯವಿರುವುದಿಲ್ಲ ಎಂದವರು ಹೇಳಿದ್ದಾರೆ.







