ಗಡಿಭಾಗದಲ್ಲಿ ಚೀನೀ ಸೈನಿಕರಿಂದ ಶಿಬಿರ ಸ್ಥಾಪನೆ ಹಿನ್ನೆಲೆ: ಲಡಾಖ್‌ನಲ್ಲಿ ಭಾರತೀಯ ಸೇನೆಯ ಬಲವರ್ಧನೆ

ಹೊಸದಿಲ್ಲಿ, ಮೇ 17: ಲಡಾಕ್ ಗಡಿಯಲ್ಲಿರುವ ಗಲ್ವಾನ್ ನದಿಯ ಬಳಿ ಚೀನಾದ ಸೇನೆ ಶಿಬಿರಗಳನ್ನು ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ, ಲಡಾಖ್‌ನ ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಲಾಗಿದ್ದು ಹೆಚ್ಚುವರಿ ಯೋಧರನ್ನು ನಿಯೋಜಿಸಿ ಭಾರತದ ಸೇನೆಯ ಬಲವರ್ಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ-ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಇತ್ತೀಚಿನ ದಿನಗಳಲ್ಲಿ ಚೀನಾದ ಸೇನೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಇಲ್ಲಿ ಉಭಯ ಸೇನೆಗಳ ನಡುವೆ ಮುಖಾಮುಖಿ ಘಟನೆ ಈ ಹಿಂದಿನಿಂದಲೂ ನಡೆಯುತ್ತಿದ್ದರೂ ಕಳೆದ ವಾರ ಇದು ದೈಹಿಕ ಘರ್ಷಣೆಯವರೆಗೆ ಮುಂದುವರಿದಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆಯ ಬಲವನ್ನು ವರ್ಧಿಸಲಾಗಿದೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
1962ರಲ್ಲಿ ಗಲ್ವಾನ್ ನದಿಯ ಬಳಿಯಿದ್ದ ಭಾರತೀಯ ಸೇನೆಯ ಶಿಬಿರವನ್ನು ಚೀನಾದ ಸೇನೆ ಸುತ್ತುವರಿದ ಘಟನೆಯ ಬಳಿಕ ಉದ್ವಿಗ್ನತೆ ಮುಂದುವರಿದು ಉಭಯ ದೇಶಗಳ ಮಧ್ಯೆ ಯುದ್ಧಕ್ಕೆ ಕಾರಣವಾಗಿತ್ತು. ಪೂರ್ವ ಲಡಾಖ್‌ನ ಡೆಮ್ಚೋಕ್ ಪ್ರದೇಶದ ಗಡಿ ಭಾಗದಲ್ಲೂ ಚೀನಾದ ಸೇನೆಯ ಚಲನವಲನ ಹೆಚ್ಚುತ್ತಿರುವುದನ್ನು ಗಮನಿಸಲಾಗಿದೆ. ರಾಷ್ಟ್ರೀಯ ಭದ್ರತಾ ಸಮಿತಿ ಲಡಾಖ್‌ನಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಉಭಯ ಸೇನೆಗಳ ಯೋಧರ ನಡುವಿನ ಗ್ರಹಿಕೆಯಲ್ಲಿ ಇರುವ ವ್ಯತ್ಯಾಸದಿಂದ ಆಗಾಗ ಮುಖಾಮುಖಿ ಘಟನೆ ಸಂಭವಿಸುತ್ತಿರುತ್ತದೆ. ಇಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕಾರ್ಯವಿಧಾನವನ್ನು ರೂಪಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇಂಡೊ-ಫೆಸಿಫಿಕ್ ಪ್ರದೇಶದ ಭದ್ರತೆಯ ವಿಷಯದಲ್ಲಿ ಭಾರತ ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಚೀನಾ ಭಾವಿಸಿರುವುದು ಈ ಆಕ್ರಮಣಕಾರಿ ಧೋರಣೆಗೆ ಕಾರಣವಾಗಿರಬಹುದು . ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಉಪಸ್ಥಿತಿ ಹೆಚ್ಚಿರುವುದರಿಂದ ತನ್ನ ಭದ್ರತೆಗೆ ಅಪಾಯ ಹೆಚ್ಚಿದೆ ಎಂದು ಭಾರತ ಆತಂಕಗೊಂಡಿದೆ. ನಾವು ನಮ್ಮ ದೇಶದ ಹಿತಾಸಕ್ತಿಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ. ಅಲ್ಲದೆ ಲಿಪುಲೇಖ್ ಪಾಸ್‌ಗೆ ರಸ್ತೆ ನಿರ್ಮಿಸುವ ವಿಷಯದಲ್ಲಿ ಭಾರತ ಮತ್ತು ನೇಪಾಳದ ಮಧ್ಯೆ ಉಂಟಾಗಿರುವ ಗಡಿ ಬಿಕ್ಕಟ್ಟಿನ ವಿಷಯದಲ್ಲಿ ಚೀನಾವು ನೇಪಾಳದ ನೆರವಿಗೆ ನಿಂತಿರುವುದು ನಮ್ಮ ಅರಿವಿಗೆ ಬಂದಿದೆ ಎಂದು ಭಾರತದ ಅಧಿಕಾರಿ ಹೇಳಿದ್ದಾರೆ.
ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳು ಭಾರತ, ಇಂಡೋನೇಶಿಯಾ , ಮಲೇಶ್ಯಾ , ವಿಯೆಟ್ನಾಮ್ ಮುಂತಾದ ದೇಶಗಳಿಗೆ ಸ್ಥಳಾಂತರಗೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಕೈಗಾರಿಕೆಗಳ ಸ್ಥಳಾಂತರ ತಪ್ಪಿಸಲು ಚೀನಾ ಕೈಗೊಳ್ಳಬಹುದಾದ ಪೂರ್ವಭಾವಿ ಉಪಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಸರಕಾರದ ಮೂಲಗಳು ತಿಳಿಸಿವೆ.







