ದ.ಕ. ಜಿಲ್ಲೆ : ಗುಡುಗು ಸಹಿತ ಭಾರೀ ಮಳೆ

ಮಂಗಳೂರು, ಮೇ 18: ದ.ಕ. ಜಿಲ್ಲೆ ಹಾಗು ಮಂಗಳೂರು ನಗರದ ವಿವಿಧೆಡೆ ಸೋಮವಾರ ಮುಂಜಾನೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಮುಂಜಾನೆ ಸುಮಾರು 5 ಗಂಟೆಗೆ ಆರಂಭಗೊಂಡ ಮಳೆಯು ಬೆಳಗ್ಗೆ 9ರವರೆಗೂ ಸುರಿದಿದೆ. ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡ ಅಂಫಾನ್ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣದ ಮಧ್ಯೆ ಮಳೆ ಸುರಿದಿದೆ.
ನಗರದ ವಿವಿಧೆಡೆ ಮತ್ತು ಹೊರವಲಯದ ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ದೇರಳಕಟ್ಟೆ, ಕೊಣಾಜೆ, ಕೂಳೂರು, ಬೈಕಂಪಾಡಿ ಮತ್ತಿತರ ಪರಿಸರದಲ್ಲಿ ಮಳೆಯಾಗಿದೆ. ಮಳೆಯೊಂದಿಗೆ ಬಿರುಗಾಳಿಯೂ ಬೀಸಿದ ಪರಿಣಾಮ ಅಲ್ಲಲ್ಲಿ ಮರಗಳು ಉರುಳಿದ್ದು, ವಿದ್ಯುತ್ ಕೂಡ ಕೈ ಕೊಟ್ಟಿತ್ತು. ರವಿವಾರದವರೆಗೆ ಸುಡು ಬೇಸಿಗೆಯ ಧಗೆಯಿಂದ ತತ್ತರಿಸಿದ್ದ ಜನತೆಗೆ ಈ ಮಳೆ ಒಂದಷ್ಟು ಆಹ್ಲಾದಕರವನ್ನುಂಟು ಮಾಡಿತು.





















