'ಕೊಲೆ ಆರೋಪಿ ಜೊತೆ ತಿರುಗಾಡಬೇಡಿ, ಹಿಂದುಳಿದ ವರ್ಗವನ್ನು ಕಡೆಗಣಿಸಬೇಡಿ'
ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ಕಲ್ಪಿಸುವ ವಿಚಾರ; ಶಾಸಕ ಕಾಮತ್ ವಿರುದ್ಧ ಬಿಜೆಪಿ ಕಾರ್ಯಕರ್ತನ ಆಕ್ರೋಶ

ಮಂಗಳೂರು, ಮೇ 18: ದುಬೈಯಿಂದ ಕಳೆದ ಮಂಗಳವಾರ ಆಗಮಿಸಿದ ಅನಿವಾಸಿ ಕನ್ನಡಿಗರಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ನಡೆದ ವಿವಾದ ಈಗ ಮಂಗಳೂರು ದಕ್ಷಿಣ ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರ ನಡುವೆ ಅಸಮಧಾನಕ್ಕೆ ಕಾರಣವಾಗಿದೆ.
ಕೋಡಿಯಾಲ್‌ಬೈಲ್‌ನ ಬಿಲ್ಲವ ಸಮಾಜ ಹಾಗೂ ಸಂಘಪರಿವಾರದ ಮುಖಂಡ ಭಾಸ್ಕರ ಪೂಜಾರಿಗೆ ( 55) ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಎಂಬಾತ ಶಾಸಕ ವೇದವ್ಯಾಸ ಕಾಮತ್ ಸಮ್ಮುಖ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗಿದೆ.
ಬಿಜೆಪಿ ಕಾರ್ಯಕರ್ತ ಸುನೀಲ್ ಬಜಿಲಕೇರಿ ಎಂಬವರು ಈ ಬಗ್ಗೆ ವೀಡಿಯೊ ಸಂದೇಶದ ಮೂಲಕ ಶಾಸಕ ಕಾಮತ್‌ರಿಗೆ ಚಾಟಿ ಬೀಸಿದ್ದಾರೆ. ಬಿಜೆಪಿ ಸಕ್ರಿಯ ಕಾರ್ಯಕರ್ತ ವಿನಾಯಕ ಬಾಳಿಗಾರ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈಯನ್ನು ಜೊತೆಗಿಟ್ಟುಕೊಂಡು ನೀವು ತಿರುಗಾಡುವುದು ಎಷ್ಟು ಸರಿ ? ಕೋಡಿಯಾಲ್‌ಬೈಲ್‌ನ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಫ್ಲ್ಯಾಟ್‌ನಲ್ಲಿ ದುಬೈಯಿಂದ ಬಂದ ಅನಿವಾಸಿ ಕನ್ನಡಿಗರ ಕ್ವಾರಂಟೈನ್‌ಗೆ ಜನನಿಬಿಡ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸುವುದು ಬೇಡ ಎಂದು ಹಿರಿಯರಾದ ಭಾಸ್ಕರ ಪೂಜಾರಿ ಹೇಳಿದ್ದು ತಪ್ಪೇ ? ಹಾಗೇ ಹೇಳಿದ ತಕ್ಷಣ ನಿಮ್ಮ ಸಮಕ್ಷಮ ನರೇಶ್ ಶೆಣೈ ಹೇಗೆ ಹಲ್ಲೆ ನಡೆಸಿದ ? ಶಾಸಕರಾಗಿ ತಾವು ಯಾಕೆ ಅದನ್ನು ತಡೆಯಲಿಲ್ಲ ? ಇದು ಬಿಜೆಪಿ ಸಂಸ್ಕೃತಿಯಾ ? ನೀವು ಜನರನ್ನು ಹೆದರಿಸುವ ರಾಜಕಾರಣ ಮಾಡುತ್ತೀರಾ ? ಅಧಿಕಾರದ ದುರುಪಯೋಗ ಯಾಕೆ ಮಾಡುತ್ತೀರಿ ? ಇಷ್ಟಾಗಿಯೂ ನಾವು ಜಾತಿ ಭೇದ ಮಾಡುತ್ತೀರಿ ಅಂತ ನೀವು ಹೇಳಿಕೊಳ್ಳುವುದು ಎಷ್ಟು ಸರಿ ? ಮಂಗಳೂರಿನಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಹಿಂದುಳಿದ ವರ್ಗದವರಾದ ನಾವು. ನಾವು ಯಾವತ್ತೂ ಜಾತಿ ಭೇದ ಮಾಡಿಲ್ಲ. ಆದರೆ ನೀವು ಜಾತಿ ಭೇದ ಮಾಡುತ್ತಿದ್ದೀರಿ. ಈವತ್ತು ಮಂಗಳೂರಿನಲ್ಲಿ ಬಿಜೆಪಿಯನ್ನು ನರೇಶ್ ಶೆಣೈ ನಡೆಸುತ್ತಿದ್ದಾನೆ ಎಂಬ ಮಾತಿದೆ. ಏನು, ಬಿಜೆಪಿಯನ್ನು ಮುನ್ನೆಡಸಲು ನಿಮಗೆ ತಾಕತ್ತಿಲ್ಲವಾ? ನಿಮ್ಮ ಮೇಲೆ ನಮಗೆ ತುಂಬಾ ಅಭಿಮಾನವಿತ್ತು. ಅದೀಗ ಕಡಿಮೆಯಾಗುತ್ತಿದೆ. ಒಬ್ಬ ಕೊಲೆ ಆರೋಪಿಯನ್ನು ಜೊತೆಗಿಟ್ಟುಕೊಂಡು ತಿರುಗಾಡುವುದು ಯಾವ ನ್ಯಾಯ ? ಹೀಗೆ ತಿರುಗಾಡಿದರೆ ಮುಂದಿನ ಚುನಾವಣೆ ಸಂದರ್ಭ ನಿಮ್ಮನ್ನು ಜನರು ಮನೆಯಿಂದ ಓಡಿಸುವುದು ಖಂಡಿತಾ.. ಎಂದೆಲ್ಲಾ ಹೇಳಿರುವ, ಶಾಸಕರನ್ನು ಕಟುವಾಗಿ ಪ್ರಶ್ನಿಸಿರುವ, ಚಾಟಿ ಬೀಸಿರುವ ವೀಡಿಯೊ ವೈರಲ್ ಆಗಿದ್ದು, ಬಿಜೆಪಿ ಪಕ್ಷದೊಳಗೂ ಚರ್ಚೆಗೆ ಗ್ರಾಸ ಒದಗಿಸಿದೆ.
ಕೊಡಿಯಲ್ ಬೈಲ್ ನ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗ ಎಂಬವರನ್ನು 2016 ಮಾರ್ಚ್ 21ರಂದು ಅವರ ಮನೆ ಎದುರು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಬಿಜೆಪಿ ಮುಖಂಡ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಈ ಪ್ರಕರಣದ ಪ್ರಮುಖ ಆರೋಪಿ. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ನರೇಶ್ ಬಾಳಿಗ ಜಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.







