ಜೂ.1ರಿಂದ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ?

ಮಂಗಳೂರು, ಮೇ 18: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮಾ.22ರಿಂದ ಸ್ಥಗಿತಗೊಂಡಿದ್ದ ಖಾಸಗಿ (ಸಿಟಿ ಮತ್ತು ಸರ್ವಿಸ್ ಹಾಗೂ ಕಾಂಟ್ರಾಕ್ಟ್ ಕ್ಯಾರೇಜ್)ಬಸ್‌ಗಳ ಸಂಚಾರವು ಜೂನ್ 1ರಿಂದ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
‘ವಾರ್ತಾಭಾರತಿ’ಯ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರಕಾರದ ಷರತ್ತು ಬದ್ಧ ಅನುಮತಿ ನೀಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಷರತ್ತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಳೆದ 7 ವರ್ಷದಿಂದ ಬಸ್ ಪ್ರಯಾಣ ದರ ಏರಿಕೆ ಮಾಡಿಲ್ಲ. ಈ ಬಾರಿ ಅದನ್ನು ಏರಿಕೆ ಮಾಡಬೇಕು. ರೋಡ್ ಟ್ಯಾಕ್ಸ್ ಪಾವತಿ ಅವಧಿಯನ್ನು ವಿಸ್ತರಿಸಬೇಕು ಇತ್ಯಾದಿ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದೇವೆ. ಮೇ 19ರ ಪೂ.11 ಗಂಟೆಗೆ ಆರ್‌ಟಿಒ ಈ ನಿಟ್ಟಿನಲ್ಲಿ ಸಭೆ ಕರೆದಿದ್ದಾರೆ. ಆ ಸಭೆಯ ಬಳಿಕ ಅಂತಿಮ ನಿರ್ಧಾರ ತೆಗೆದು ಕೊಳ್ಳಲಾಗುವುದು. ಮೇ 31ರವರೆಗೆ ಲಾಕ್‌ಡೌನ್ ವಿಸ್ತರಣೆಗೊಂಡ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚೇನೂ ಇರದು. ಅದಕ್ಕಾಗಿ ಜೂ.1ರಿಂದ ಬಸ್ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.





