ತರಗತಿಗಳನ್ನು ಸರಿದೂಗಿಸಲು ಎಲ್ಲ ರಜೆಗಳಿಗೂ ಕತ್ತರಿ ಸಾಧ್ಯತೆ!

ಬೆಂಗಳೂರು, ಮೇ 18: ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ವರ್ಷ ಸಾಕಷ್ಟು ವಿಳಂಬವಾಗಿ ಆರಂಭವಾಗುವುದರಿಂದ ತರಗತಿಗಳನ್ನು ಸರಿದೂಗಿಸಲು ದಸರಾ ಮತ್ತು ಕ್ರಿಸ್‍ಮಸ್ ರಜೆಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಮೊದಲಿಗೆ ದಸರಾ ರಜೆಯನ್ನು 21 ದಿನ ನೀಡಲಾಗುತ್ತಿತ್ತು. ಕೆಲವು ಕ್ರೈಸ್ತ ಸಮುದಾಯದ ಆಡಳಿತದ ಶಾಲೆಗಳು ಇದರಲ್ಲೇ ವಿಭಾಗ ಮಾಡಿ ಕ್ರಿಸ್‍ಮಸ್‍ಗೆ 10 ದಿನ ರಜೆ ನೀಡುತ್ತಿದ್ದವು. ಇದಕ್ಕೂ ಮೊದಲು ರಾಜ್ಯ ಸರಕಾರ 29 ದಿನ ದಸರಾ ರಜೆ ನೀಡುತ್ತಿತ್ತು. ಕಾಲ ಕ್ರಮೇಣ ಶೈಕ್ಷಣಿಕ ತರಗತಿಗಳು ಹೆಚ್ಚಾಗಿದ್ದರಿಂದ ಅದನ್ನು 21 ದಿನಕ್ಕಿಳಿಸಿತು.
ಈ ಬಾರಿ ಲಾಕ್‍ಡೌನ್‍ನಿಂದಾಗಿ ಶೈಕ್ಷಣಿಕ ವರ್ಷ ವೇಳಾಪಟ್ಟಿಯೇ ಬದಲಾಗಿಬಿಟ್ಟಿದೆ. ಸಿಕ್ಕ ಅವಧಿಯೊಳಗೆ ಪಠ್ಯಕ್ರಮಗಳ ಬೋಧನೆ, ಸಿಸಿಇಗಾಗಿ ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ ರಜೆಕಡಿತ ಮಾಡಲು ಶಿಕ್ಷಣ ಇಲಾಖೆ ಆಲೋಚಿಸಿದೆ ಎನ್ನಲಾಗಿದೆ.
ಪ್ರತಿ ಶನಿವಾರ ಅರ್ಧದಿನ ತರಗತಿ ತೆಗೆದುಕೊಳ್ಳುವ ಬದಲು ಪೂರ್ತಿ ದಿನ ತೆಗೆದುಕೊಳ್ಳುವ ಬಗ್ಗೆಯೂ ಆಲೋಚಿಸುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ 2020-21ನೇ ವೇಳಾಪಟ್ಟಿ ಪ್ರಕಾರ ಮೇ 29 ರಿಂದ ಶಾಲೆಗಳು ಮರು ಆರಂಭಗೊಳ್ಳಬೇಕಾಗಿತ್ತು.
ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗಳನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಆಲೋಚಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೊದಲಿಗೆ ಎಸೆಸೆಲ್ಸಿ ಪರೀಕ್ಷೆ ಆಯೋಜಿಸಿ, ಅನಂತರವಷ್ಟೇ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.







