ಅಂಫಾನ್ ಚಂಡಮಾರುತ ಭೀತಿ: ಗಂಗೊಳ್ಳಿಯಲ್ಲಿ ಮೀನುಗಾರಿಕೆ ಸ್ಥಗಿತ
ವಾಪಾಸ್ಸಾದ ಬೋಟುಗಳು: ಮಲ್ಪೆಯಲ್ಲಿ ಮುಂದುವರಿದ ಮೀನುಗಾರಿಕೆ

ಉಡುಪಿ, ಮೇ 18: ಅಂಫಾನ್ ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ಬೋಟು ಗಳು ಬಂದರಿಗೆ ವಾಪಾಸ್ಸಾಗಿದ್ದು, ಇಂದಿನಿಂದ ಎರಡು ದಿನ ಮೀನುಗಾರಿಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆದರೆ ಮಲ್ಪೆಯಲ್ಲಿ ಯಾವುದೇ ತೊಂದರೆ ಆಗದ ಹಿನ್ನೆಲೆುಲ್ಲಿ ಮೀನುಗಾರಿಕೆ ಮುಂದುವರಿದಿದೆ.
ಲಾಕ್‌ಡೌನ್ ಸಡಿಲಿಕೆಯ ಬಳಿಕ ಇಲಾಖೆಯಿಂದ ಅನುಮತಿ ಪಡೆದು 30-45 ಯಾಂತ್ರೀಕೃತ ಬೋಟುಗಳು ಗಂಗೊಳ್ಳಿ ಬಂದರಿನಿಂದ ಮೀನು ಗಾರಿಕೆ ಯಲ್ಲಿ ತೊಡಗಿಸಿಕೊಂಡಿದ್ದವು. ಇದೀಗ ಚಂಡಮಾರುತದ ಪರಿಣಾಮ ಸಮುದ್ರ ದಲ್ಲಿ ಗಂಟೆಗೆ 45ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರು ವುದು ವರದಿಯಾಗಿದೆ. ಇದರಿಂದ ಅಲೆಗಳ ಅಬ್ಬರ ಹೆಚ್ಚಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮೇ 17ರಂದು ರಾತ್ರಿಯೇ ಬಹುತೇಕ ಬೋಟುಗಳು ಗಂಗೊಳ್ಳಿ ಬಂದರಿಗೆ ವಾಪಾಸ್ಸಾಗಿದ್ದು, ಉಳಿದ ಎರಡು ಬೋಟುಗಳು ಇಂದು ಬೆಳಗ್ಗೆ ವಾಪಾಸ್ಸಾಗಿದೆ. ಅಪಾಯದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಮೀನುಗಾರಿಕೆಗೆ ತೆರಳದಿರಲು ಮೀನುಗಾರರು ನಿಶ್ಚಯಿಸಿದ್ದಾರೆ. ಸದ್ಯ ಎಲ್ಲ ಬೋಟುಗಳು ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿವೆ.
ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ
ಚಂಡಮಾರುತದ ಪರಿಣಾಮವಾಗಿ ಮಲ್ಪೆ ಸಮುದ್ರದಲ್ಲಿ ಗಾಳಿಯು ತೀವ್ರವಾಗಿದ್ದು, ಗಂಟೆಗೆ 30-40ಕಿ.ಮೀ. ವೇಗದಲ್ಲಿ ಇದೆ. ಈ ಅಪಾಯದ ಹಿನ್ನೆಲೆಯಲ್ಲಿ ಮೀನುಗಾರರು ಮಲ್ಪೆ ಬಂದರಿನಿಂದ ಕೇವಲ ಮೂರು ಗಂಟೆ ದೂರದ ಸಮುದ್ರದಲ್ಲಿಯೇ ಮೀನುಗಾರಿಕೆ ನಡೆಸುತ್ತಿದ್ದಾರೆ. ತೀರ ದಲ್ಲಿ ಮೀನು ಗಾರಿಕೆ ನಡೆಸುತ್ತಿರುವವರು ಈಗಾಗಲೇ ಬಂದರು ಸೇರಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಸದ್ಯಕ್ಕೆ ಮಲ್ಪೆ ಬಂದರಿನಿಂದ ಸುಮಾರು 250-300 ಸಣ್ಣ ಟ್ರಾಲ್‌ಬೋಟು, 370ಅಶ್ವಶಕ್ತಿಯ ಬೋಟು ಮತ್ತು ಆಳಸಮುದ್ರ ಬೋಟುಗಳು ಮೀನುಗಾರಿಕೆ ಯಲ್ಲಿ ತೊಡಗಿಸಿಕೊಂಡಿವೆ. ಸಣ್ಣ ಬೋಟುಗಳು ಒಂದೇ ದಿನದಲ್ಲಿ ಮೀನು ಗಾರಿಕೆ ನಡೆಸಿ ವಾಪಾಸ್ಸು ಬರುತ್ತಿದ್ದರೆ, 370 ಬೋಟು ಗಳು ಎರಡು ಮೂರು ದಿನಗಳ ಕಾಲ ಮೀನುಗಾರಿಕೆ ನಡೆಸುತ್ತಿವೆ. ಆಳ ಸಮುದ್ರ ಬೋಟುಗಳು 5-6ದಿನಗಳ ಕಾಲ ಮೀನುಗಾರಿಕೆ ನಡೆಸಿ ಬಂದರಿಗೆ ವಾಪಾಸ್ಸು ಬರುತ್ತಿವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.
ಮಳೆಗಾಲ ಹತ್ತಿರ ಬರುತ್ತಿದ್ದಂತೆ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮೇ 25ರ ನಂತರ ಒಂದೊಂದೇ ಬೋಟು ಗಳು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬಂದರಿಗೆ ಬಂದು ಲಂಗರು ಹಾಕಲಿವೆ. ಮೇ 31ರ ನಂತರ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಮಲ್ಪೆಯಿಂದ ತೆರಳಿರುವ ನೂರಾರು ಬೋಟುಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಚಂಡಮಾರುತದಿಂದ ನಮ್ಮಲ್ಲಿ ಯಾವುದೇ ತೊಂದರೆ ಆಗಿಲ್ಲ. ಅಲ್ಲದೆ ಇಲ್ಲಿನ ಬೋಟುಗಳು ಹತ್ತಿರದಲ್ಲಿಯೇ ಮೀನುಗಾರಿಕೆ ನಡೆಸುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ತೀರದಲ್ಲಿ ರುವ ಬೋಟುಗಳು ಈಗಾಗಲೇ ಬಂದರು ಸೇರಿವೆ. ಉಳಿದ ಬೋಟುಗಳು ಮೀನುಗಾರಿಕೆ ನಡೆಸುತ್ತಿವೆ.
-ಶಿವಕುಮಾರ್, ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ, ಮಲ್ಪೆ
ಚಂಡಮಾರುತದಿಂದ ಇಲ್ಲಿನ ಮೀನುಗಾರಿಕೆಗೆ ಯಾವುದೇ ಸಮಸ್ಯೆ ಆಗಿಲ್ಲ. ಬೋಟುಗಳು ಮೀನುಗಾರಿಕೆಯನ್ನು ಮುಂದುವರೆಸಿದೆ. ಇಲ್ಲಿನ ಯಾವುದೇ ಬೋಟುಗಳು ಬಹು ದೂರದ ಆಳ ಸಮುದ್ರಕ್ಕಾಗಲಿ, ಹೊರರಾಜ್ಯಕ್ಕಾಗಲಿ ಮೀನುಗಾರಿಕೆಗೆ ತೆರಳಲಿಲ್ಲ ತೀರಕ್ಕೆ ಬರುವಂತೆ ಇಲಾಖೆಯಿಂದಲೂ ನಮಗೆ ಈವರೆಗೆ ಯಾವುದೇ ಸೂಚನೆಗಳು ಬಂದಿಲ್ಲ.
-ಕೃಷ್ಣ ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ







