ಬೇಡಿಕೆಗಳು ಈಡೇರದಿದ್ದಲ್ಲಿ ವಾಹನಗಳನ್ನು ರಸ್ತೆಗೆ ಇಳಿಸುವುದಿಲ್ಲ: ರಾಜ್ಯ ಟ್ರಾವೆಲ್ ಆಪರೇಟರ್ ಸಂಘ

ಬೆಂಗಳೂರು, ಮೇ 18: ರಾಜ್ಯ ಸರಕಾರ ಆರು ತಿಂಗಳ ರಸ್ತೆ ತೆರಿಗೆ ವಿನಾಯಿತಿ ಸೇರಿ ವಿವಿಧ ಬೇಡಿಕೆ ಈಡೇರಿಸುವವರೆಗೂ ಪ್ರವಾಸಿ ವಾಹನ, ಖಾಸಗಿ ಬಸ್‍ಗಳನ್ನು ರಸ್ತೆಗೆ ಇಳಿಸದಿರಲು ರಾಜ್ಯ ಟ್ರಾವೆಲ್ ಆಪರೇಟರ್ ಸಂಘ ನಿರ್ಧರಿಸಿದೆ.
ಲಾಕ್‍ಡೌನ್ ತೆರವಾಗಿ ವಾಹನ ಸಂಚಾರಕ್ಕೆ ಅನುಮತಿ ನೀಡಿದರೂ ನಾವು ವಾಹನಗಳನ್ನು ರಸ್ತೆಗೆ ಇಳಿಸುವುದಿಲ್ಲ. ಎರಡು ತಿಂಗಳಿಂದ ಆದಾಯವಿಲ್ಲದೆ ಪ್ರವಾಸಿ ವಾಹನ ಹಾಗೂ ಖಾಸಗಿ ವಾಹನ ಮಾಲಕರು, ಚಾಲಕರು ಸಂಕಷ್ಟದಲ್ಲಿದ್ದಾರೆ. ಎಲ್ಲ ವಲಯಕ್ಕೂ ಪರಿಹಾರದ ಪ್ಯಾಕೇಜ್ ನೀಡಿರುವ ಸರಕಾರಗಳು ಖಾಸಗಿ ಬಸ್ ಮಾಲಕರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ.
ನಮ್ಮ ನೆರವಿಗೆ ಬರುವವರೆಗೂ ಪ್ರವಾಸಿ ವಾಹನ, ಕಾಂಟ್ರ್ಯಾಕ್ಟ್, ಸ್ಟೇಜ್ ಆಧಾರಿತ ಖಾಸಗಿ ಬಸ್‍ಗಳನ್ನು ರಸ್ತೆಗಿಳಿಸದಿರಲು ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ ಹೇಳಿದ್ದಾರೆ.
ಆಯುಕ್ತರಿಗೆ ಮನವಿ: ಪ್ರತಿ ವರ್ಷ ಸರಕಾರಕ್ಕೆ ಸಾವಿರಾರು ಕೋಟಿ ರೂ. ರಸ್ತೆತೆರಿಗೆ ಪಾವತಿಸುತ್ತೇವೆ. ಆದರೆ, ಈಗಿನ ಸಂಕಷ್ಟದ ಸಂದರ್ಭದಲ್ಲಿ ಸರಕಾರಗಳು ಖಾಸಗಿ ವಾಹನ ಮಾಲಕರ ಕೈ ಹಿಡಿಯದಿರುವುದು ನೋವಿನ ಸಂಗತಿ. ಎರಡು ತ್ರೈ ಮಾಸಿಕ ರಸ್ತೆತೆರಿಗೆ ವಿನಾಯಿತಿ ನೀಡಬೇಕು. ಆರು ತಿಂಗಳ ರಸ್ತೆತೆರಿಗೆಯಲ್ಲಿ ಶೇ.59 ರಷ್ಟು ವಿನಾಯಿತಿ ನೀಡಬೇಕು ಎಂಬುದು ಸೇರಿ ನಮ್ಮ ಬೇಡಿಕೆಗಳ ಪಟ್ಟಿಯನ್ನು ಸಾರಿಗೆ ಇಲಾಖೆ ಆಯುಕ್ತರಿಗೆ ನೀಡಿದ್ದಾರೆ....
ಸರಕಾರ ಕನಿಷ್ಠ ಆರು ತಿಂಗಳು ರಸ್ತೆತೆರಿಗೆ ವಿನಾಯಿತಿ ನೀಡಬೇಕು. ಬ್ಯಾಡ್ಜ್ ಹೊಂದಿರುವ ಎಲ್ಲ ಚಾಲಕರಿಗೂ ಐದು ಸಾವಿರ ರೂ. ಪರಿಹಾರಧನ ನೀಡಬೇಕು. ಕೊರೋನ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ವಾಹನಗಳನ್ನು ವಶಕ್ಕೆ ಪಡೆದು ಹಣ ಪಾವತಿಸಬೇಕು.
-ಬೈರವ ಸಿದ್ದರಾಮಯ್ಯ, ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲಕರ ಸಂಘದ ಅಧ್ಯಕ್ಷ







