ಮೇ 26ರಿಂದ ವಲಸೆ ಕಾರ್ಮಿಕರಿಗೆ ಉಚಿತ ಅಕ್ಕಿ ವಿತರಣೆ: ಸಚಿವ ಗೋಪಾಲಯ್ಯ

ಬೆಂಗಳೂರು, ಮೇ 18: ವಲಸೆ ಕಾರ್ಮಿಕರಿಗೆ ಉಚಿತವಾಗಿ ಪ್ರತಿವ್ಯಕ್ತಿಗೆ 5ಕೆಜಿ ಅಕ್ಕಿಯನ್ನು ಮೇ 26ರಿಂದ 31ರವರೆಗೆ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ-ಪ್ಯಾಕೇಜ್-2ರಲ್ಲಿ ಮಾಡಬೇಕಾದ ಪಡಿತರ ವಿತರಣೆ ಕುರಿತಂತೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಿಗೆ ಉಚಿತವಾಗಿ ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಈ ವಲಸೆ ಕಾರ್ಮಿಕರು ಯಾವುದೇ ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ಹಾಗೂ ಸ್ವಂತ ಮನೆ ಹೊಂದಿರಬಾರದು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಂತವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರವನ್ನು ವಿತರಿಸಲಾಗುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಪಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರ ವಲಸೆ ಕಾರ್ಮಿಕರನ್ನು ಗುರುತಿಸಿದ್ದು, ರಾಜ್ಯದಲ್ಲಿ 40.19ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿಯೇ 22.60ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಇವರೆಲ್ಲರಿಗೂ ಉಚಿತವಾಗಿ ಅಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಾಕ್ಸ್
ಕೇಂದ್ರ ಸರಕಾರ ಪ್ರಧಾನ್‍ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ ಪ್ಯಾಕೇಜ್-2ರಲ್ಲಿ ಜೂನ್ ತಿಂಗಳಲ್ಲಿ ನೀಡುವ ಉಚಿತ ಪಡಿತರವನ್ನು ಜೂ.1ರಿಂದ 10ರವರೆಗೆ ನೀಡಲಾಗುತ್ತದೆ. ಇದರಲ್ಲಿ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2ಕೆಜಿ ಕಡಲೆಕಾಳು ನೀಡಲಾಗುತ್ತದೆ.
-ಕೆ.ಗೋಪಾಲಯ್ಯ, ಆಹಾರ ಸಚಿವ







