ಕೊರೋನ ಸ್ಫೋಟ ಮತ್ತು ಡಬ್ಲ್ಯುಎಚ್ಒ ಕ್ರಮಗಳ ಕುರಿತು ತನಿಖೆಗೆ ಭಾರತ ಸೇರಿದಂತೆ 62 ರಾಷ್ಟ್ರಗಳಿಂದ ನಿರ್ಣಯ

ಫೈಲ್ ಚಿತ್ರ
ಹೊಸದಿಲ್ಲಿ,ಮೇ 18: ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನ ಸ್ಫೋಟ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಕ್ರಮಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ಕೋರಿ ನಿರ್ಣಯವೊಂದನ್ನು ಸೋಮವಾರ ಆರಂಭಗೊಂಡ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಮಂಡಿಸಲಾಗುತ್ತಿದ್ದು, ಭಾರತ,ಐರೋಪ್ಯ ಒಕ್ಕೂಟ ಮತ್ತು ಆಸ್ಟ್ರೇಲಿಯಾ ಸೇರಿದಂತೆ 62 ದೇಶಗಳು ಈ ನಿರ್ಣಯವನ್ನು ಬೆಂಬಲಿಸಿವೆ.
ಘಟನಾಕ್ರಮದೊಂದಿಗೆ ಕೋವಿಡ್-19ಗೆ ಡಬ್ಲ್ಯುಎಚ್ಒ ಅಡಿ ಕೈಗೊಳ್ಳಲಾದ ಜಾಗತಿಕ ಆರೋಗ್ಯ ರಕ್ಷಣೆ ಕ್ರಮಗಳ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ವೌಲ್ಯಮಾಪನ ನಡೆಯಬೇಕು ಎಂದು ನಿರ್ಣಯವು ಕೋರಿದೆ.
ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಳ್ಳುವ ಸಾಧ್ಯತೆಯಿದೆ. ಐರೋಪ್ಯ ಒಕ್ಕೂಟ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ದೇಶಗಳಿಗೂ ಸ್ವೀಕಾರಾರ್ಹ ಭಾಷೆಯಲ್ಲಿರುವ ನಿರ್ಣಯಕ್ಕೆ ಚೀನಾ ಅಥವಾ ಅಮೆರಿಕ ಆಕ್ಷೇಪವನ್ನು ವ್ಯಕ್ತಪಡಿಸಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿದವು. ಚೀನಾ ಮತ್ತು ಅಮೆರಿಕ ಈವರೆಗೆ ನಿರ್ಣಯವನ್ನು ಬೆಂಬಲಿಸಿರುವ 62 ದೇಶಗಳ ಗುಂಪಿನೊಂದಿಗೆ ಕೈಜೋಡಿಸಿಲ್ಲ.
ನಿರ್ಣಯವು ಕೊರೋನ ವೈರಸ್ನ ಪ್ರಾಣಿಮೂಲವನ್ನು ಮತ್ತು ಮಧ್ಯವರ್ತಿ ವಾಹಕಗಳ ಸಂಭಾವ್ಯ ಪಾತ್ರ ಸೇರಿದಂತೆ ಅದು ಮಾನವರಿಗೆ ಹರಡಿದ್ದು ಹೇಗೆ ಎನ್ನುವುದನ್ನು ಗುರುತಿಸಲು ಅಂತರರಾಷ್ಟ್ರೀಯ ಏಜೆನ್ಸಿಗಳ ಜೊತೆಗೂಡಿ ಕಾರ್ಯಾಚರಿಸುವಂತೆ ಡಬ್ಲ್ಯುಎಚ್ಒ ಮಹಾ ನಿರ್ದೇಶಕರಿಗೆ ಕರೆಯನ್ನೂ ನೀಡಿದೆ.
ಸೋಮವಾರ ಡಬ್ಲ್ಯುಎಚ್ಒ ಕಾರ್ಯಕಾರಿ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಭಾರತವು ಕೊರೋನ ವೈರಸ್ನ ಮೂಲ ಎಂದು ಚೀನಾವನ್ನು ದೂರುವ ಯಾವುದೇ ಬೇಡಿಕೆಯನ್ನು ಈವರೆಗೆ ಬೆಂಬಲಿಸಿಲ್ಲ. ಐರೋಪ್ಯ ಒಕ್ಕೂಟದ ನಿರ್ಣಯದಲ್ಲಿಯೂ ಚೀನಾ ಅಥವಾ ವುಹಾನ್ ಅನ್ನು ಹೆಸರಿಸಲಾಗಿಲ್ಲ ಮತ್ತು ಚೀನಾದ ಮಿತ್ರರಾಷ್ಟ್ರ ರಷ್ಯಾ ನಿರ್ಣಯವನ್ನು ಬೆಂಬಲಿಸಿದೆ.
ಬ್ರಿಟನ್, ಜಪಾನ್, ಇಂಡೋನೇಷ್ಯಾ, ಕೆನಡಾ, ಬ್ರೆಝಿಲ್,ನ್ಯೂಝಿಲಂಡ್, ದಕ್ಷಿಣ ಕೊರಿಯಾ ಮತ್ತು ಟರ್ಕಿ ಇತ್ಯಾದಿ ದೇಶಗಳೂ ನಿರ್ಣಯವನ್ನು ಬೆಂಬಲಿಸಿವೆ.
ಕಳೆದ ಮಾರ್ಚ್ನಲ್ಲಿ ಜಿ-20 ಆನ್ಲೈನ್ ಶೃಂಗಸಭೆಯಲ್ಲಿ ಮಾತನಾಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಬಗ್ಗೆ ಮೃದು ನಿಲುವು ಹೊಂದಿರುವುದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಡಬ್ಲುಎಚ್ಒದ ಸುಧಾರಣೆ ಮತ್ತು ಬಲವರ್ಧನೆಗೆ ಕರೆ ನೀಡಿದ್ದರೆ,ಅದೇ ಸಂದರ್ಭ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡಬ್ಲ್ಯುಎಚ್ಒ ಅನ್ನು ಚೀನಾದ ಕೈಗೊಂಬೆ ಎಂದು ಬಣ್ಣಿಸಿದ್ದರು.







