ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಹೊಸದಿಲ್ಲಿ, ಮೇ 18: ಸಿಬಿಎಸ್‌ಇ ಬಾಕಿ ಉಳಿದಿರುವ 10 ಮತ್ತು 12ನೇ ತರಗತಿಯ ಪರೀಕ್ಷೆಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಜುಲೈ 1ರಿಂದ 15ರವರೆಗೆ ಪರೀಕ್ಷೆ ನಡೆಯಲಿದೆ.
ಮಾರ್ಚ್ 25ರಂದು ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈಶಾನ್ಯ ದಿಲ್ಲಿಯಲ್ಲಿ ಮಾತ್ರ 10ನೇ ತರಗತಿ ಪರೀಕ್ಷೆಗಳು ಬಾಕಿ ಉಳಿದಿವೆ. 10ನೇ ತರಗತಿ ಪರೀಕ್ಷೆಗೆ ಜುಲೈ 1ರಿಂದ ಮೊದಲ್ಗೊಂಡು 4 ದಿನಾಂಕ ನಿಗದಿಯಾಗಿದೆ. ಸಮಾಜ ವಿಜ್ಞಾನ ಪರೀಕ್ಷೆ ಮೊದಲ ದಿನ, ಮರುದಿನ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ತಿಳಿಸಿದ್ದಾರೆ.
12ನೇ ತರಗತಿಗೆ ಜುಲೈ 1ರಂದು ಗೃಹ ವಿಜ್ಞಾನ ಪರೀಕ್ಷೆ, ಮರುದಿನ ಹಿಂದಿ ಭಾಷೆಯ ಉಭಯ ಕೋರ್ಸ್‌ಗಳ ಪರೀಕ್ಷೆ, ಜುಲೈ 9ರಂದು ಬಿಸಿನೆಸ್ ಸ್ಟಡೀಸ್, 10ರಂದು ಬಯೊಟೆಕ್ನಾಲಜಿ, 11ರಂದು ಜಿಯೋಗ್ರಫಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳೇ ಸ್ಯಾನಿಟೈಸರ್ ಬಾಟಲಿ ತರಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸುರಕ್ಷಿತ ಅಂತರ ನಿಯಮವನ್ನು ಪಾಲಿಸಲಾಗುತ್ತದೆ ಎಂದವರು ಹೇಳಿದ್ದಾರೆ.





