ಬೆಂಗಳೂರಿನಲ್ಲಿ ಸೋಮವಾರ 24 ಕೊರೋನ ಪ್ರಕರಣ ಪತ್ತೆ

ಬೆಂಗಳೂರು, ಮೇ 18: ಶಿವಾಜಿನಗರದ ಖಾಸಗಿ ಹೊಟೇಲ್‍ನಲ್ಲಿ ಕೊರೋನ ಸೋಂಕಿಗೆ ಒಳಗಾಗಿದ್ದ (ಪಿ-653) ವ್ಯಕ್ತಿಯಿಂದ ಒಟ್ಟು 16 ಜನರಿಗೆ ಹಾಗೂ ಮಂಗಮ್ಮನಪಾಳ್ಯದಲ್ಲಿ ಐದು, ತಮಿಳುನಾಡು ಮೂಲದ ಇಬ್ಬರು, ನೆಲಮಂಗಲದ ಒಬ್ಬರು ಸೇರಿದಂತೆ ಒಟ್ಟು 24 ಕೊರೋನ ಪ್ರಕರಣ ಪತ್ತೆಯಾಗಿದೆ.
ಪಿ-653 ವ್ಯಕ್ತಿಯ ಸಂಪರ್ಕದಲ್ಲಿದ್ದ 10ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಸೋಂಕು ಪತ್ತೆಯಾಗಿದೆ. ಶಿವಾಜಿನಗರ ಖಾಸಗಿ ಹೊಟೇಲ್‍ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ (ಪಿ-653) ವ್ಯಕ್ತಿಗೆ ಮೇ 5ರಂದು ಸೋಂಕು ದೃಢಪಟ್ಟಿದೆ. ಆತನ ಪ್ರಾಥಮಿಕ ಸಂಪರ್ಕದ 14 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 91 ಜನರು ಸೇರಿ ಒಟ್ಟು 105 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಮೇ 13 ರಿಂದ 64 ಜನರನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಒಟ್ಟು 40 ಜನರಿಗೆ ಸೋಂಕು ದೃಢವಾಗಿದೆ. ಪ್ರತಿನಿತ್ಯ 20 ರಿಂದ 22 ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಅಲ್ಲದೇ, ಮಂಗಮ್ಮನಪಾಳ್ಯ ವಾರ್ಡ್ ಕಂಟೈನ್‍ಮೆಂಟ್‍ನಲ್ಲಿ ಓಡಾಡಿದ ಹಾಗೂ ಗೂಡ್ಸ್ ಆಟೋ ಚಾಲಕ ಪಿ-911ನ ಸಂಪರ್ಕದಲ್ಲಿ ಇದ್ದು ರ್ಯಾಂಡಮ್ ಪರೀಕ್ಷೆಗೆ ಒಳಗಾದವರ ಪೈಕಿ ಐವರಿಗೆ ಕೊರೋನ ದೃಢಪಟ್ಟಿದೆ.
ಅಂತರ್ ರಾಜ್ಯ ಪ್ರಯಾಣ ಮಾಡಿದ ತಮಿಳುನಾಡಿನಿಂದ ಬಂದ ಇಬ್ಬರಿಗೆ ಕೊರೋನ ದೃಢಪಟ್ಟಿದೆ. ಇವರನ್ನು ಮೊದಲೇ ಕ್ವಾರಂಟೈನ್ ಮಾಡಲಾಗಿತ್ತು. ನೆಲಮಂಗಲ ದಾಬಸ್ ಪೇಟೆಯಿಂದ ಬಂದಿರುವ 20 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಒಬ್ಬನಿಂದ 40 ಜನರಿಗೆ ಸೋಂಕು: ಶಿವಾಜಿನಗರ ವಾರ್ಡ್‍ನ ಚಾಂದಿನಿ ಚೌಕ್ ಖಾಸಗಿ ಹೊಟೇಲ್ ಕಾರ್ಮಿಕ ಒಟ್ಟು 40 ಜನರಿಗೆ ಸೋಂಕು ಹರಡಲು ಕಾರಣವಾಗಿದ್ದಾನೆ. ಈತನ ಸಂಪರ್ಕದ 105 ಜನರಲ್ಲಿ 64 ಜನರ ಪರೀಕ್ಷಾ ವರದಿ ಮಾತ್ರ ಬಂದಿದ್ದು, ಇನ್ನೂ 41 ಜನರ ಪರೀಕ್ಷಾ ವರದಿ ಬರುವುದು ಬಾಕಿಯಿದೆ.
ರ್ಯಾಂಡಂ ಪರೀಕ್ಷೆ ವರದಿ ನೆಗೆಟಿವ್: ಪಾದರಾಯನಪುರದಲ್ಲಿ ಕೆಲವು ರಸ್ತೆಗಳ ಮನೆಗೊಬ್ಬರನ್ನು ಮೇ 14ರಿಂದ ರ್ಯಾಂಡಂ ಕೊರೋನ ತಪಾಸಣೆ ಮಾಡಲಾಗುತ್ತಿದೆ. ಮೇ 14 ರಂದು 11 ಜನರು ಹಾಗೂ ಮೇ 15 ರಂದು 15 ಜನರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಎರಡೂ ದಿನದ 25 ಜನರ ವರದಿಗಳು ನೆಗೆಟಿವ್ ಬಂದಿವೆ.
ವಲಸೆ ಕಾರ್ಮಿಕರು ಊರಿಗೆ: ಹೊಂಗಸಂದ್ರ ವಲಸೆ ಕಾರ್ಮಿಕರು ಬಿಬಿಎಂಪಿ ಕ್ವಾರಂಟೈನ್ ಅವಧಿ ಮುಗಿಸಿದ ಹಾಗೂ ಗುಣಮುಖರಾಗಿ ಬಂದ 106 ವಲಸೆ ಕಾರ್ಮಿಕರನ್ನು ಊರಿಗೆ ಕಳಿಸಿಕೊಟ್ಟಿದೆ. ಆದರೆ, ಅದೇ ವಲಯದ ಮಂಗಮ್ಮನಪಾಳ್ಯ ವಾರ್ಡ್‍ನಲ್ಲಿ ಇನ್ನೂ 46 ಜನ ಕ್ವಾರಂಟೈನ್‍ನಲ್ಲಿ ಇದ್ದಾರೆ.
ಬೆಂಗಳೂರಿನಲ್ಲಿ 245 ಕೊರೋನ ಪತ್ತೆ: ನಗರದಲ್ಲಿ ಇಲ್ಲಿಯವರಿಗೆ 245 ಪ್ರಕರಣ ಪತ್ತೆಯಾಗಿದ್ದು, 122 ಜನರು ಗುಣಮುಖರಾಗಿದ್ದು, 115 ಜನ ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 8,824 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ನಗರದಲ್ಲಿ 17 ಕಂಟೈನ್ಮೆಂಟ್ ಝೋನ್: ನಗರದಲ್ಲಿ ಹೆಚ್ಚು ಕೊರೋನ ಸೋಂಕಿರುವ ಪಾದರಾಯನಪುರ, ಹೊಂಗಸಂದ್ರ, ಶಿವಾಜಿನಗರವನ್ನು ಸೀಲ್‍ಡೌನ್ ಮಾಡಿ ಉಳಿದ 17 ಕಡೆ ಕಂಟೈನ್ಮೆಂಟ್ ವಲಯಗಳಾಗಿ ಮುಂದುವರೆಸಲಾಗಿದೆ. ಲಾಕ್‍ಡೌನ್ ಸಡಿಲಿಕೆಯಿಂದಾಗಿ ನಗರದಲ್ಲಿ ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಗೊಂಡಿದೆ. 50ಕ್ಕೂ ಹೆಚ್ಚು ಕಂಟೈನ್‍ಮೆಂಟ್ ವಲಯ ಇದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗ ಕೇವಲ 17 ಕಂಟೈನ್ಮೆಂಟ್ ವಲಯಗಳಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.