ಝೀ ನ್ಯೂಸ್ ನ 28 ಸಿಬ್ಬಂದಿಗೆ ಕೊರೋನ ಪಾಸಿಟಿವ್
"ನಮ್ಮವರು ರೋಗ ಹರಡುವವರಲ್ಲ" ಎಂದು ಸ್ಪಷ್ಟೀಕರಣ ನೀಡಿದ ಸುಧೀರ್ ಚೌಧರಿ

ಸುಧೀರ್ ಚೌಧರಿ
ಹೊಸದಿಲ್ಲಿ, ಮೇ 18 : ಝೀ ನ್ಯೂಸ್ ಚಾನಲ್ ನ 28 ಸಿಬ್ಬಂದಿಗೆ ಕೊರೋನ ಪಾಸಿಟಿವ್ ಇರುವುದು ಸೋಮವಾರ ದೃಢವಾಗಿದೆ. ಶುಕ್ರವಾರ ಚಾನಲ್ ನ ಒಬ್ಬ ಸಿಬ್ಬಂದಿ ಪಾಸಿಟಿವ್ ಬಂದ ಮೇಲೆ ಎಲ್ಲರನ್ನು ಪರೀಕ್ಷೆಗೊಳಪಡಿಸಿದಾಗ 28 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಾನಲ್ ನ ಸಂಪಾದಕ ಸುಧೀರ್ ಚೌಧರಿ "ಇದು ಕಷ್ಟಕಾಲ. ನಮ್ಮ ಚಾನಲ್ ನ 28 ಮಂದಿಗೆ ಕೊರೋನ ಸೋಂಕು ಪಾಸಿಟಿವ್ ಬಂದಿದೆ. ಅವರೆಲ್ಲರೂ ಕ್ಷೇಮವಾಗಿದ್ದಾರೆ. ಅವರಿಗೆ ಯಾವುದೇ ಲಕ್ಷಣಗಳಿಲ್ಲ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರು ಈ ಸವಾಲಿನ ಸಂದರ್ಭದಲ್ಲಿ ಅವರ ವೃತ್ತಿಪರತೆ ಹಾಗು ಧೈರ್ಯವನ್ನು ಮೆಚ್ಚುತ್ತೇನೆ" ಎಂದು ಹೇಳಿದ್ದಾರೆ.
ಕೊರೋನ ಪಾಸಿಟಿವ್ ಬಂದ ಝೀ ನ್ಯೂಸ್ ಸಿಬ್ಬಂದಿಗಳನ್ನು ಚಾನಲ್ ನ ಇತರ ಸಿಬ್ಬಂದಿ ಅನುಚಿತವಾಗಿ ನಡೆಸಿಕೊಂಡರು ಹಾಗು ಒಬ್ಬ ಸಿಬ್ಬಂದಿ "ನಾವೇನು ತಬ್ಲೀಗಿಗಳೇ" ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ಪತ್ರಕರ್ತ ಅವೀಕ್ ಸೇನ್ ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸುಧೀರ್ ಚೌಧರಿ "ನಮ್ಮ ಸಿಬ್ಬಂದಿ ರೋಗ ಹರಡುವವರಲ್ಲ, ಅವರು ಈ ಕಠಿಣ ಸಂದಭದಲ್ಲೂ ವರದಿ ಮಾಡಿದ್ದಾರೆ" ಎಂದು ಸ್ಪಷ್ಟೀಕರಣ ನೀಡಬೇಕಾಯಿತು.
These are difficult times. 28 of my colleagues at @ZeeNews have tested positive for COVID-19. Thankfully all of them are fine,mostly asymptomatic. I wish them a speedy recovery and salute their courage & professionalism. Sharing the official statement with you. pic.twitter.com/50yW2auj0Y
— Sudhir Chaudhary (@sudhirchaudhary) May 18, 2020