ಕೇರಳದಲ್ಲಿ ಲಾಕ್‌ಡೌನ್ ಸಡಿಲಿಕೆ: ಬಸ್,ಆಟೋ ಸಂಚಾರಕ್ಕೆ ಅಸ್ತು
ತಿರುವನಂತಪುರ,ಮೇ 18: ಕೇರಳದಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಭೆಯು ನಿರ್ಧರಿಸಿದೆ. ಜಿಲ್ಲೆಗಳ ಒಳಗೆ ಕಡಿಮೆ ದೂರದ ಬಸ್‌ಗಳ ಸಂಚಾರ ಆರಂಭಗೊಳ್ಳುತ್ತಿದ್ದು, ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದೆ. ಪ್ರತಿ ಬಸ್‌ನಲ್ಲಿ ಕೇವಲ 24 ಪ್ರಯಾಣಿಕರಿಗೆ ಅವಕಾಶವಿರುವುದರಿಂದ ಸರಕಾರವು ಬಸ್ ಮಾಲಕರಿಗೆ ತೆರಿಗೆ ರಿಯಾಯಿತಿಗಳನ್ನು ನೀಡಲಿದೆ.
ಇದೇ ರೀತಿ ಓರ್ವ ಪ್ರಯಾಣಿಕನನ್ನು ಮಾತ್ರ ಸಾಗಿಸಬೇಕೆಂಬ ಷರತ್ತಿನೊಡನೆ ಆಟೊಗಳ ಸೇವೆಯೂ ಆರಂಭಗೊಳ್ಳುವ ಸಾಧ್ಯತೆಯಿದೆ. ಅಂತರ್-ಜಿಲ್ಲಾ ಪ್ರಯಾಣಕ್ಕೆ ಪಾಸ್‌ಗಳನ್ನು ಕಡ್ಡಾಯವಾಗಿಸಲು ಸರಕಾರವು ನಿರ್ಧರಿಸಿದೆ. ಮೇ ತಿಂಗಳಲ್ಲಿ ನಡೆಯಲಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಎಚ್‌ಎಸ್‌ಇ ಪರೀಕ್ಷೆಗಳನ್ನು ಜೂನ್‌ಗೆ ಮುಂದೂಡಲಾಗಿದೆ.
ಬುಧವಾರದಿಂದ ಮದ್ಯದಂಗಡಿಗಳು,ಬಾರ್‌ಗಳು ಮತ್ತು ಕ್ಷೌರದಂಗಡಿಗಳು ಪುನರಾರಂಭಗೊಳ್ಳಲಿವೆ. ಬಾರ್‌ಗಳಲ್ಲಿ ಮದ್ಯದ ಪಾರ್ಸಲ್‌ಗೆ ಮಾತ್ರ ಅವಕಾಶವಿರಲಿದ್ದು,ಕ್ಷೌರದಂಗಡಿಗಳಲ್ಲಿ ಕೇವಲ ತಲೆಗೂದಲನ್ನು ಮಾತ್ರ ಕತ್ತರಿಸಿಕೊಳ್ಳಬಹುದು. ಶೇವಿಂಗ್‌ಗೆ ಅನುಮತಿಯನ್ನು ನೀಡಲಾಗಿಲ್ಲ. ಬ್ಯೂಟಿ ಪಾರ್ಲರ್‌ಗಳನ್ನೂ ತೆರೆಯುವಂತಿಲ್ಲ.