ಮಹಾರಾಷ್ಟ್ರದ ಜೊತೆ ನೀರು ವಿನಿಮಯ ಕುರಿತು ಶೀಘ್ರ ಸಭೆ: ರಮೇಶ್ ಜಾರಕಿಹೊಳಿ

ಬೆಳಗಾವಿ, ಮೇ 18: ಪ್ರತಿವರ್ಷ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದ ಜೊತೆ ಕೃಷ್ಣಾ ನದಿ ನೀರು ವಿನಿಮಯ ಮಾಡಿಕೊಳ್ಳುವ ಕುರಿತು ಶೀಘ್ರದಲ್ಲೆ ಬೆಂಗಳೂರಿನಲ್ಲಿ ಉಭಯ ರಾಜ್ಯಗಳ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಸೋಮವಾರ ನಗರದಲ್ಲಿನ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅವರ ಕಚೇರಿಯಲ್ಲಿ ನಡೆದ ಗಟ್ಟಿ ಬಸವಣ್ಣ ಯೋಜನೆ ಕುರಿತ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಹಾರಾಷ್ಟ್ರದ ಜೊತೆ ನೀರು ವಿನಿಮಯ ಕುರಿತು ಶೀಘ್ರದಲ್ಲಿಯೆ ಆ ರಾಜ್ಯದ ನೀರಾವರಿ ಸಚಿವರ ಜೊತೆ ಬೆಂಗಳೂರಿನಲ್ಲಿ ಚರ್ಚೆ ನಡೆಸಲಾಗುವುದು. ಆದರೆ ಸಭೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಸಭೆಯಲ್ಲಿ ಪರಸ್ಪರ ಚರ್ಚಿಸಿದ ಬಳಿಕವೇ ನೀರು ವಿನಿಮಯ ಕುರಿತು ಸರಕಾರ ತೀರ್ಮಾನ ಪ್ರಕಟಿಸಲಿದೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಹಿತರಕ್ಷಣೆ ಮತ್ತು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅವರ ಆಶಯದ ಪ್ರಕಾರವೆ ಕೆಲಸ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಜಲಾಶಯಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದ್ದು, ಮುಂದಿನ ವಾರ ಮೈಸೂರು ಭಾಗದಲ್ಲಿ ಭೇಟಿ ನೀಡಲಿದ್ದೇನೆ. ಬೆಳಗಾವಿ ಜಿಲ್ಲೆಯ ಎಲ್ಲ 18 ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗದ ಜೊತೆ ಚರ್ಚಿಸಿ, ಮನವರಿಕೆ ಮಾಡಬೇಕಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಿರುವುದರಿಂದ ರಸ್ತೆ ಮಾರ್ಗದ ಮೂಲಕವೇ ದಿಲ್ಲಿಗೆ ತೆರಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ವೈದ್ಯರ ಸಲಹೆ ಮತ್ತು ಸರಕಾರದ ಮಾರ್ಗಸೂಚಿಯನ್ನು ಪಾಲಿಸಿದರೆ ಕೊರೋನ ತಡೆಗಟ್ಟುವುದು ದೊಡ್ಡ ಸವಾಲು ಅಲ್ಲ. ಆದುದರಿಂದ, ಎಲ್ಲರೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಅವರು ಮಾಡಿಕೊಂಡರು.







