ಮದ್ಯ ನಿಷೇಧಕ್ಕೆ ಆಗ್ರಹಿಸಿ ವನಿತೆಯರ ಮನಿ ಆರ್ಡರ್ ಚಳವಳಿ

ಬೆಂಗಳೂರು, ಮೇ 18: ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ವಿವಿಧ ಭಾಗದ ಮಹಿಳೆಯರು ಮನಿ ಆರ್ಡರ್ ಮಾಡುವ ಮೂಲಕ ವಿನೂತನವಾಗಿ ಚಳವಳಿ ನಡೆಸಿದರು.
ಸೋಮವಾರ ಬೆಂಗಳೂರು, ರಾಯಚೂರು, ಕೋಲಾರ, ಬೆಳಗಾವಿ ಸೇರಿದಂತೆ ನೂರಾರು ಮಹಿಳೆಯರು ಅಂಚೆ ಕಚೇರಿಗೆ ಭೇಟಿ ನೀಡಿ ಮನಿ ಆರ್ಡರ್ ಮಾಡಿ, ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದರು.
ಲಾಕ್‍ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ನಿಬರ್ಂಧಿಸಿದ ಕಾರಣ ಮದ್ಯ ಸೇವಿಸುವ ಲಕ್ಷಾಂತರ ಮಂದಿ ವ್ಯಸನಮುಕ್ತರಾಗಿದ್ದಾರೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದ ಕುಟುಂಬಗಳಲ್ಲಿ ನೆಮ್ಮದಿ, ಶಾಂತಿ ನೆಲೆಸಿತ್ತು. ಆದರೆ, ಸರಕಾರ ಆದಾಯದ ನೆಪ ಹೇಳಿ ಸಮಾಜದ ವಿರೋಧದ ನಡುವೆಯೂ ಮತ್ತೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ ಎಂದು ಚಳವಳಿ ನಿರತ ಮಹಿಳೆಯರು ದೂರಿದರು.
ತಮ್ಮ ಬೇಡಿಕೆಗಳ ಸಂದೇಶ ಸರಕಾರಕ್ಕೆ ರವಾನಿಸುವ ಉದ್ದೇಶದಿಂದ ರಾಜ್ಯ ವ್ಯಾಪ್ತಿಯಲ್ಲಿ ಮಹಿಳೆಯರು ಸ್ಥಳೀಯ ಅಂಚೆ ಕಚೇರಿಗಳಲ್ಲಿ 10 ಹಾಗೂ 20 ರೂ.ಗಳನ್ನು ಮನಿಯಾರ್ಡರ್ ಮಾಡಿದ್ದಾರೆ ಎಂದು ಚಳವಳಿಯ ಕಾರ್ಯಕರ್ತೆ ಸ್ವರ್ಣಾ ಭಟ್ ವಾರ್ತಾಭಾರತಿ ಪತ್ರಿಕೆಗೆ ತಿಳಿಸಿದರು.





