ಶಾಲೆಗಳನ್ನು ಆರಂಭಿಸದಂತೆ ಪೋಷಕರ ಒತ್ತಾಯ
ಬೆಂಗಳೂರು, ಮೇ 18: ಕೋವಿಡ್-19 ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಶಾಲೆಗಳನ್ನು ಆರಂಭಿಸಬೇಡಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಪೋಷಕರು ಒತ್ತಾಯಿಸಿದ್ದಾರೆ.
ತಕ್ಷಣಕ್ಕೆ ಶಾಲೆ ಆರಂಭಿಸಬೇಕೇ ಅಥವಾ ತಡವಾಗಿ ಆರಂಭಿಸಬೇಕೇ ಎಂಬ ಬಗ್ಗೆ ಸುರೇಶ್‍ಕುಮಾರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ನಡೆಸಿದ ಸಮೀಕ್ಷೆಗೆ ಪೋಷಕರಿಂದ ಉತ್ತರಗಳ ಮಹಾಪೂರವೇ ಹರಿದು ಬಂದಿದೆ.
ಎಲ್‍ಕೆಜಿ, ಯುಕೆಜಿ ಮತ್ತು ಪ್ರಾಥಮಿಕ ತರಗತಿಗಳನ್ನು ತಡವಾಗಿ ಆರಂಭಿಸಬೇಕು ಎಂದು ಅನೇಕ ಪೋಷಕರು ಆಗ್ರಹಿಸಿದ್ದಾರೆ. ತಮ್ಮ ಮಕ್ಕಳನ್ನು ಈಗಲೇ ಶಾಲೆಗೆ ಕಳುಹಿಸಲು ಆತಂಕವಾಗುತ್ತದೆ ಎಂದೂ ಅಳಲು ತೋಡಿಕೊಂಡಿದ್ದಾರೆ ಎಂಬುದಾಗಿ ಫೇಸ್‍ಬುಕ್‍ನಲ್ಲಿ ಸುರೇಶ್‍ಕುಮಾರ್ ಹೇಳಿದ್ದಾರೆ.
ಅವಸರದಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸಬಾರದು ಎಂದು ಪೋಷಕರು ಸಲಹೆ ನೀಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಪ್ರಾಥಮಿಕ ಶಾಲೆಗಳನ್ನು ಈ ವರ್ಷ ರದ್ದು ಮಾಡಿದರೂ ತಪ್ಪಿಲ್ಲವೆಂಬ ಸಲಹೆಗಳನ್ನೂ ನೀಡಿದ್ದಾರೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದೂ ಪೋಷಕರು ಆಗ್ರಹಿಸಿದ್ದಾರೆ.





